ಯುವಕರ ಪ್ರತಿಭೆ ಪ್ರೋತ್ಸಾಹಿಸಬೇಕಿದೆ: ಎಸ್ಪಿ
ಗದಗ: ಯುವಕರಲ್ಲಿನ ಪ್ರತಿಭೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕೆಲಸವಾದಾಗ ಮಾತ್ರ ಅವರು ದೇಶಕ್ಕೆ ಕೊಡುಗೆಯಾಗಿ ರೂಪುಗೊಳ್ಳುತ್ತಾರೆ ಎಂದು ಎಸ್ಪಿ ಡಾ. ಎಸ್.ಡಿ. ಶರಣಪ್ಪ ಹೇಳಿದರು.
ಅವರು ನಗರದ ಶ್ರೀ ಗಣೇಶ ದೇವಸ್ಥಾನದ ಸಭಾಭವನದಲ್ಲಿ ಹೆಡ್.ಹೆಲ್ಡ್.ಹೈ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯೋತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ಯುವಕರಲ್ಲಿರುವ ಕೌಶಲ್ಯ ಗುರುತಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಸಮುದಾಯ ಸಮಾಜದ ಹಾಗೂ ದೇಶದ ಬೆನ್ನೆಲುಬಾಗಿದ್ದು, ಅವರಿಗಾಗಿ ಸರ್ಕಾರ ಹಾಗೂ ಅರೆ ಸರ್ಕಾರಿ ಸಂಸ್ಥೆಗಳು ಆಯೋಜಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವವಿಕಸನಗೊಳಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಅವಕಾಶ ವಂಚಿತರಾದ ಯುವ ಪ್ರತಿಭಾವಂತರು ಈ ಯೋಜನೆಯ ಲಾಭ ಪಡೆಯಲು ಮುಂದಾಗಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ತಿಳಿಸಿದರು. ಗಣೇಶ ದೇವಸ್ಥಾನದ ಸಮಿತಿಯ ಅಧ್ಯಕ್ಷ ಪ್ರಸನ್ನಕುಮಾರ ಹಾಗೂ ರಾಜೇಶ ಮೇಟಿ ಸಾಂದರ್ಭಿಕವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹೆಡ್ಹೆಲ್ಡ್ಹೈ ಸಂಸ್ಥೆಯ ವ್ಯವಸ್ಥಾಪಕ ಅಮೀತಕುಮಾರ ಮಾತನಾಡಿ, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಹೇಳಿದರು. ಸಮಾಜದಲ್ಲಿ ಅವಕಾಶವಂಚಿತರಾದ ಅನಕ್ಷಸ್ಥ ಯುವಕರು ಕಂಪ್ಯೂಟರ್, ಇಂಗ್ಲೀಷ್ ಜ್ಞಾನ, ಸೇರಿದಂತೆ ಹಲವು ಕೌಶಲ್ಯಗಳ ಬಗ್ಗೆ ಜ್ಞಾನ ಪಡೆಯಲು ಸಂಸ್ಥೆಗೆ ಸಂಪರ್ಕಿಸಲು ಅವರು ಮನವಿ ಮಾಡಿದರು. ಶ್ವೇತಾ ಹಿರೇಮಠ, ಕವಿತಾಕುಮಾರಿ, ಶ್ರೀಧರ ರೋನಾಲ್ಡ್, ಮಲ್ಲಮ್ಮ, ಹರ್ಷಾ ಮಳೇಕರ, ತಿಮ್ಮಣ್ಣಾ, ಸಂಗಣ್ಣಾ, ಅಮರನಾಥ, ಮಲ್ಲಪ್ಪಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಯುವಕ, ಯುವತಿಯರು ಪಾಲ್ಗೊಂಡಿದ್ದರು.