ಛಾಯಾಚಿತ್ರ ವಿಶಿಷ್ಟ ಕಲೆ
ಕನ್ನಡಪ್ರಭ ವಾರ್ತೆ, ಗದಗ, ಆ. 19
ಛಾಯಾಚಿತ್ರ ತೆಗೆಯುವುದು ಒಂದು ವಿಶಿಷ್ಟ ಕಲೆಯಾಗಿದೆ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ನಗರದ ಜ. ತೋಂಟದಾರ್ಯ ಮಠದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಅಂಗವಾಗಿ ಗದಗ ಜಿಲ್ಲಾ ಛಾಯಾಗ್ರಾಹಕ ಹಾಗೂ ವಿವಿದೋದ್ಧೇಶಗಳ ಸಂಘದ ವತಿಯಿಂದ ಜ. ತೋಂಟದಾರ್ಯ ಮಠದ ಆವರಣದಲ್ಲಿರುವ ಪತ್ರಿವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನ ಕಾಲದ ಹರಪ್ಪ ಮತ್ತು ಮಹಂಜೋದಾರ ಪದ್ಧತಿಯಿಂದಲೂ ಈ ಕಲೆ ನಡೆದುಕೊಂಡು ಬಂದಿದೆ. ಹರಪ್ಪ ಮತ್ತು ಮಹಂಜೋದಾರ ಕಾಲದಲ್ಲಿ ಗಿಡಗಳ ರಸದಿಂದ ಬಣ್ಣವನ್ನು ತಯಾರಿಸಿ ಕಲ್ಲುಗಳ ಮೇಲೆ ಬಣ್ಣಗಳಿಂದ ಚಿತ್ರಗಳನ್ನು ಬಿಡಿಸಲಾಗುತ್ತಿತ್ತು. ಅದು ಕ್ರಮೇಣ ತಾಂತ್ರಿಕತೆಯ ಮೂಲಕ ಇಂದು ಹೊಸ ಹೊಸ ಆವಿಷ್ಕಾರಗಳಿಂದ ಒಂದು ನೈಪುಣ್ಯತೆ ಪಡೆದುಕೊಳ್ಳುವ ಮೂಲಕ ಇಂದು ಛಾಯಾಚಿತ್ರವಾಗಿ ಬೆಳಕಿಗೆ ಬಂದಿದೆ. ಈ ಛಾಯಾಚಿತ್ರ ಕಲೆಯು ಒಂದು ವಿಶಿಷ್ಟವಾಗಿದ್ದು, ಇದು ಹಿಂದಿನ ಇತಿಹಾಸ ನೆನಪಿಸುವ ಒಂದು ಸಾಧನವಾಗಿದೆ. ಇದನ್ನು ಬೆಳೆಸುವ ಕಾರ್ಯ ಅತ್ಯವಶ್ಯ. ಗದಗ ಜಿಲ್ಲೆಯ ಪರಿಸರದ ಜಿಲ್ಲೆಯಾಗಿದ್ದು ಇಲ್ಲಿ ಕಪ್ಪತಗುಡ್ಡವು ಮೈತಳೆದುಕೊಂಡಿದ್ದು, ಛಾಯಾಚಿತ್ರಕಾರರು ಕಪ್ಪತಗುಡ್ಡದಲ್ಲಿರುವ ಸೌಂದರ್ಯವನ್ನು ನಾಡಿಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ. ಕಪ್ಪತಗುಡ್ಡದಲ್ಲಿ ಹಲವು ರೀತಿಯ ಪ್ರಾಣಿ, ಪಕ್ಷಿ ಸಂಕುಲಗಳು ಜೀವಿಸುತ್ತಿದ್ದು, ಇವುಗಳ ಕುರಿತು ಛಾಯಾಗ್ರಾಹಕರು ನಾಡಿನ ಜನತೆಗೆ ತಿಳಿಸುವ ಕಾರ್ಯಮಾಡಬೇಕು. ಪ್ರತಿಯೊಬ್ಬರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡುವುದು ಅತಿ ಅವಶ್ಯವಾಗಿದ್ದು, ಎಲ್ಲರೂ ಪರಿಸರದ ಬಗ್ಗೆ ಜಾಗೃತಿ ಹೊಂದಿ ಗಿಡ-ಮರಗಳನ್ನು ಬೆಳೆಸುವಂತಾಗಬೇಕು ಎಂದರು.
ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಅಂಗವಾಗಿ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್.ಎಸ್. ಗೌಡರ, ಕಾರ್ಯದರ್ಶಿ ಶಂಕರ ಗುರಿಕಾರ, ಕೊಟ್ರೇಶ ಮೆಣಸಿನಕಾಯಿ, ಮಹಾಂತದೇವರು ಸೇಬುಣಸಿ, ಗಂಗಾಧರ ದೇವರು ಸೇರಿದಂತೆ ಗದಗ ಜಿಲ್ಲೆಯ ಎಲ್ಲ ಛಾಯಾಗ್ರಾಹಕರು ಇದ್ದರು.