ಸುದ್ದಿ ಸಂಕ್ಷೇಪ
ಇಂದು ಮೂರ್ತಿ ಪ್ರತಿಷ್ಠಾಪನೆ
ಗದಗ: ಆ. 20ರ ಬೆಳಗ್ಗೆ 8.30 ಗಂಟೆಗೆ ಆದಿಶಕ್ತಿ ಮರಿಯಮ್ಮದೇವಿ ಹಾಗೂ ಸಂತ ಸೇವಾಲಾಲರ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಸ್ಥಳೀಯ ಕಳಸಾಪುರ ರಸ್ತೆಯ ಸೇವಾಲಾಲ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ಲಿಂಗಸೂರಿನ ವಿಜಯ ಮಹಾಂತೇಶ್ವರ ಶಾಖಾ ಮಠದ ಸಿದ್ಧಲಿಂಗ ಶ್ರೀಗಳು ವಹಿಸುವರು. ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ಬಂಜಾರಾ (ಲಂಬಾಣಿ) ನೌಕರರ ಸಂಘದ ಅಧ್ಯಕ್ಷ ಡಿ.ಎಲ್. ನಾಯಕ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಪ್ರಾ. ಎಸ್.ವಿ. ಸಂಕನೂರ, ಪಿ.ಆರ್. ಜಾಧವ, ಎ.ಎನ್. ನಾಗರಳ್ಳಿ, ಕೃಷ್ಣಾ ಚವ್ಹಾಣ, ಶಾರದಾ ತೋಟದ, ಶ್ರೀನಿವಾಸ ಹುಯಿಲಗೋಳ, ಡಾ. ಡಿ. ಮೋಹನ್, ಭೀಮಸಿಂಗ್ ರಾಠೋಡ, ಅನಿಲ ಗರಗ, ರವಿಕಾಂತ ಅಂಗಡಿ ಮುಂತಾದವರು ಉಪಸ್ಥಿತರಿರುವರು ಎಂದು ಕರ್ನಾಟಕ ಬಂಜಾರಾ ಲಂಬಾಣಿ ನೌಕರರ ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದಿನಿಂದ ಸಂಸ್ಕೃತ ಸಪ್ತಾಹ
ಗದಗ: ಆ. 20 ರಿಂದ 27ರ ವರೆಗೆ ನಗರದ ಜ. ತೋಂಟದಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಪ್ರತಿದಿನ ಸಂಜೆ 6 ರಿಂದ 7 ಗಂಟೆಯವರೆಗೆ ಸಂಸ್ಕೃತ ಸಪ್ತಾಹ ಆಯೋಜಿಸಿದೆ. ಇದರ ಅಂಗವಾಗಿ ಸಂಸ್ಕೃತ ಸಂಭಾಷಣೆ, ಸುಭಾಷಿತ ಚಿಂತನ, ಪ್ರಾರ್ಥನಾ, ಶ್ಲೋಕ, ಕಂಠಪಾಠಾದಿಗಳು ಜರುಗಲಿವೆ. ಪಾಠಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀರಂಗಸಾ ಕಬಾಡಿ ಇವರಿಂದ ಮುಳಗುಂದ ರಸ್ತೆ ಅಂಬಾಭವಾನಿ ಮಂದಿರದಲ್ಲಿ ಭಗವದ್ಗೀತಾ ಪಠಣ ಮತ್ತು ಗೋಪಾಲ ಜೋಶಿ ಇವರಿಂದ ತ್ರಿಕೂಟೇಶ್ವರ ಮಂದಿರದಲ್ಲಿ ಬೆಳಗ್ಗೆ 6 ರಿಂದ ರುದ್ರಮಂತ್ರ ಪಠಣ ಜರುಗಲಿವೆ. ಆಸಕ್ತರು ಮತ್ತು ಅಭಿಮಾನಿಗಳು ಇದರ ಪ್ರಯೋಜನ ಪಡೆಯಲು ಕೋರಿದೆ.
ವಿಪ ಚುನಾವಣೆಯಲ್ಲಿ ಗೆಲುವು ನಮ್ಮದೇ: ಶಾಸಕ ದೊಡ್ಡಮನಿ
ಶಿರಹಟ್ಟಿ: ತಾಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಸದಸ್ಯರನ್ನು ಭೇಟಿಯಾಗಿ ಬರಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಅವರನ್ನು ಬೆಂಬಲಿಸಿ, ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಕೇಳಿಕೊಂಡಿದ್ದು, ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವು ಖಚಿತ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು. ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದ್ದು, ಗ್ರಾಮಗಳ ಅಭಿವೃದ್ಧಿ ಕೈಗೊಳ್ಳುವಲ್ಲಿ ಯಾವುದೇ ಅಡತಡೆಗಳು ಬರುವುದಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವರೇ ಗದಗ ಜಿಲ್ಲೆಯವರಾಗಿರುವುದರಿಂದ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ. ಸ್ಥಳೀಯ ಸಂಸ್ಥೆಗಳ ಸದಸ್ಯರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 3 ತಿಂಗಳು ಕಳೆದಿದ್ದು, ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಭರವಸೆಯಂತೆ ಶೇ. 60 ರಷ್ಟನ್ನು ಈಡೇರಿಸಲಾಗಿದೆ. ರೈತರಿಗೆ ರು. 2 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಘೋಷಣೆ ಮಾಡಲಾಗಿದೆ. ದೇವರಾಜ ಅರಸು ಹಾಗೂ ಅಂಬೇಡ್ಕರ್ ನಿಗಮದಲ್ಲಿ ಪಡೆಯಲಾಗಿದ್ದ ಸಾಲ ಮನ್ನಾ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್ ಬೆಂಬಲಿಸುವಂತೆ ಸದಸ್ಯರಿಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ.ಎಸ್. ಪಾಟೀಲ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಕೆ.ಎನ್. ಸ್ವಾಮಿ, ಬುಡನಶ್ಯಾ ಮಕಾನದಾರ, ಮಂಜುನಾಥ ಘಂಟಿ, ಫಕೀರೇಶ ಭೋರಶೆಟ್ಟರ, ಮಹಾಂತೇಶ ದಶಮನಿ ಮುಂತಾದವರು ಉಪಸ್ಥಿತರಿದ್ದರು.