ಸ್ಲಂ ಜನರಿಗೆ ಪರಿಚಯ ಪತ್ರ ನೀಡದಿದ್ದರೆ ಉಗ್ರ ಹೋರಾಟ: ಅಶೋಕ ಮ್ಯಾಗೇರಿ
ಕನ್ನಡಪ್ರಭ ವಾರ್ತೆ, ಗದಗ, ಆ. 19
ರಾಜ್ಯ ಸರ್ಕಾರದ ಆದೇಶದಂತೆ ಗದಗ-ಬೆಟಗೇರಿ ಅವಳಿ ನಗರದ ಸ್ಲಂ ಪ್ರದೇಶದ ನಿವಾಸಿಗಳಿಗೆ ಪರಿಚಯ ಪತ್ರ ವಿತರಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಕೊಳಚೆ ಸಮಿತಿಯಿಂದ ನಗರದ ಸ್ಲಂಬೋರ್ಡ್ ಕಚೇರಿಯ ಮುಂದೆ ಧರಣಿ ನಡೆಸಿ, ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಅಶೋಕ ಮ್ಯಾಗೇರಿ ತಿಳಿಸಿದರು.
ಅವರು ಭಾನುವಾರ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸ್ಲಂ ಜನರಿಗೆ ಪರಿಚಯ ಪತ್ರ ನೀಡಬೇಕೆಂದು ಸರ್ಕಾರದ ಆದೇಶವಿದ್ದರೂ ಸ್ಲಂ ಬೋರ್ಡ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ತಕ್ಷಣ ಅಧಿಕಾರಿಗಳು ಸರ್ಕಾರದ ಸುತ್ತೋಲೆ ಪ್ರಕಾರ ನಗರದ ಸ್ಲಂ ಪ್ರದೇಶಗಳ ಸರ್ವೆ ಕಾರ್ಯ ಕೈಗೊಂಡು ಪರಿಚಯ ಪತ್ರ ನೀಡಬೇಕಾಗಿದೆ. ಆದರೆ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದು, ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಸಮಿತಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಸಮಿತಿಯ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಮಾತನಾಡಿ, ನಗರದ ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆಗೆ ಅರ್ಜಿ ಹಾಕಿ ಹಲವು ವರ್ಷಗಳಾದರೂ ಘೋಷಣೆ ಆಗಿಲ್ಲ. ಸಮಿತಿಯಿಂದ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತವು ನಗರದ ಗುಡಿಸಲು ಪ್ರದೇಶಗಳನ್ನು ಘೋಷಣೆ ಮಾಡಲು ವಿಳಂಬ ಮಾಡುತ್ತಿದ್ದು, ಜಿಲ್ಲಾಡಳಿತದ ವಿಳಂಬ ನೀತಿಯನ್ನು ಖಂಡಿಸಿ ಹೋರಾಟ ನಡೆಸಲು ಸ್ಲಂ ಜನರು ಮುಂದಾಗಬೇಕಿದೆ ಎಂದರು. ಸಮಿತಿಯ ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ ಮಾತನಾಡಿದರು. ಸಭೆಯಲ್ಲಿ ಮಹಿಳಾ ಸಮಿತಿಯ ಅಧ್ಯಕ್ಷೆ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ದುರ್ಗಪ್ಪ ನವಲಗುಂದ, ಯುವ ಸಮಿತಿಯ ಉಪಾಧ್ಯಕ್ಷ ಯಲ್ಲಪ್ಪ ರಾಮಗಿರಿ, ಇಬ್ರಾಹಿಂ ಮುಲ್ಲಾ, ಅಶೋಕ ಕುಸಬಿ, ಪರಶುರಾಮ ಕಾಳೆ, ಹೊನ್ನಪ್ಪ ಸಾಕಿ, ಅನಿಲ ಕಾಳೆ, ಕೆ.ಜಿ. ಬ್ಯಾಹಟ್ಟಿ, ದುರ್ಗಪ್ಪ ಹೊಂಬಳ ಮುಂತಾದವರು ಉಪಸ್ಥಿತರಿದ್ದರು. ಸಮಿತಿಯ ಉಪಾಧ್ಯಕ್ಷ ರವಿ ಬೆಳಮಕರ ನಿರೂಪಿಸಿದರು. ಯುವ ಸಮಿತಿಯ ಅಧ್ಯಕ್ಷ ಶರೀಫ ಬಿಳೆಯಲಿ ವಂದಿಸಿದರು.