ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಲಂಬಾಣಿ ಸಮಾಜ ನಿಷ್ಠೆಗೆ ಹೆಸರುವಾಸಿ: ಸಚಿವ ಎಚ್ಕೆ

Mainashree
Updated On : 21 Aug 2013, 11:26 am

ಗದಗ: ಲಂಬಾಣಿ ಸಮಾಜವು ತತ್ವ, ನಿಷ್ಠೆಗೆ ಹೆಸರುವಾಸಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಮಂಗಳವಾರ ಸ್ಥಳೀಯ ಕಳಸಾಪುರ ರಸ್ತೆಯಲ್ಲಿರುವ ಸೇವಾಲಾಲ ನಗರದಲ್ಲಿ ಕರ್ನಾಟಕ ಬಂಜಾರ ಲಂಬಾಣಿ ನೌಕರರ ಸಂಘದ ನೇತೃತ್ವದಲ್ಲಿ ಆದಿಶಕ್ತಿ ಮರಿಯಮ್ಮದೇವಿ, ಸಂತ ಸೇವಾಲಾಲರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇಂದು ಲಂಬಾಣಿ ಸಮಾಜ ಬಾಂಧವರು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಸ್ವಾಗತಾರ್ಹ. ಈ ಹಿಂದೆ ಲಂಬಾಣಿ ಸಮುದಾಯದ ಜನರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದ್ದರು. ಆದರೆ ಈಗ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಒಳ್ಳೆಯ ಬೆಳವಣಿಗೆ. ಯಾವುದೇ ಸಮಾಜವು ಅಭಿವೃದ್ಧಿ ಹೊಂದಬೇಕಾದಲ್ಲಿ ಆ ಸಮಾಜವು ಶಿಕ್ಷಣ ರಂಗದಲ್ಲಿ ಯಶಸ್ಸು ಹೊಂದುವುದು ಅತ್ಯವಶ್ಯ.  ಸಮಾಜದ ಏಳ್ಗೆಗೆ ಹಾಗೂ ಸಮಾಜವನ್ನು ಗುರುತಿಸುವಂತೆ ಮಾಡಿದ ಸಂತ ಸೇವಾಲಾಲರ ಕಾರ್ಯ ಶ್ಲಾಘನೀಯ. ಲಂಬಾಣಿ ಸಮುದಾಯದ ವತಿಯಿಂದ ನಗರದಲ್ಲಿ ಆದಿಶಕ್ತಿ ಮರಿಯಮ್ಮದೇವಿ ಹಾಗೂ ಸಂತ ಸೇವಾಲಾಲ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ್ದು, ಮುಂದಿನ ದಿನಗಳಲ್ಲಿ ಸಮಾಜವು ಇನ್ನೂ ಉತ್ತಮ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಇತರೇ ಸಮುದಾಯದ ಜನರಿಗೆ ಮಾದರಿಯಾಗುವಂತಹ ಕಾರ್ಯಗಳನ್ನು ಕೈಗೊಳ್ಳಲಿ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಪ್ರದೇಶ ಬಂಜಾರ ಕಲ್ಯಾಣ ಸಂಘದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಬಂಜಾರ ಸಮುದಾಯವು ಆರ್ಥಿಕವಾಗಿ ಹಿನ್ನೆಡೆ ಹೊಂದುತ್ತಿದೆ. ಸರ್ಕಾರವು ಲಂಬಾಣಿ ಸಮುದಾಯದ ಜನರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡುವಲ್ಲಿ ಆಸಕ್ತಿ ವಹಿಸಬೇಕಾಗಿದೆ. ಶೇ. 10ರಷ್ಟು ಮಾತ್ರ ಲಂಬಾಣಿ ಸಮಾಜದವರು ಅಭಿವೃದ್ಧಿ ಹೊಂದಿದ್ದು, ಶೇ. 90 ರಷ್ಟು ಸಮಾಜ ಬಾಂಧವರು ಅಭಿವೃದ್ಧಿ ಹೊಂದಬೇಕಾಗಿದ್ದು, ಈ ಕುರಿತು ಸಮಾಜವು ಅರಿತುಕೊಳ್ಳುವ ಮೂಲಕ ಸಮಾಜದ ಏಳ್ಗೆಗೆ ಎಲ್ಲರೂ ಶ್ರಮಿಸುವಂತಾಗಲಿ ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಲಿಂಗಸೂರಿನ ವಿಜಯ ಮಹಾಂತೇಶ್ವರ ಶಾಖಾಮಠದ ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಕರ್ನಾಟಕ ಬಂಜಾರ (ಲಂಬಾಣಿ) ನೌಕರರ ಸಂಘದ ಅಧ್ಯಕ್ಷ ಡಿ.ಎಲ್. ನಾಯಕ ವಹಿಸಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಪಿ.ಆರ್. ಜಾಧವ, ಜಿಪಂ ಸದಸ್ಯೆ ಶಾರದಾ ತೋಟದ, ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ, ಅನಿಲ ಶಿಂಗ್ಟಾಲಕೇರಿ, ಬಿ.ಬಿ. ಅಸೂಟಿ, ಅನಿಲ ಗರಗ, ಭೀಮಸಿಂಗ್ ರಾಠೋಡ, ಎಂ.ಕೆ. ಚವ್ಹಾಣ, ಚಂದ್ರು ಚವ್ಹಾಣ, ಗಂಗಾಧರ ನಭಾಪುರ ಮುಂತಾದವರು ಉಪಸ್ಥಿತರಿದ್ದರು. ಡಾ. ಬಿ.ಎಲ್. ಚವ್ಹಾಣ ಸ್ವಾಗತಿಸಿದರು. ಬಿ.ಎಸ್. ರಾಠೋಡ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement