ಸರ್ಕಾರದ ಕ್ರಮಕ್ಕೆ ಖಂಡನೆ: ಪ್ರತಿಭಟನೆ
ಗಜೇಂದ್ರಗಡ: ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಯೋಜನೆ ನಿರ್ವಹಣೆ ವಹಿಸುವ ಸರ್ಕಾರದ ಕ್ರಮ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಸಂಘಟನೆಯ ನಗರ ಸಮಿತಿ ಉಪಾಧ್ಯಕ್ಷ ಶಿವಾನಂದ ಬೋಸ್ಲೆ ಮಾತನಾಡಿ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದ ಪ್ರಕಾರ ರಾಷ್ಟ್ರದ ಯಾವುದೇ ಮಗು ಹಸಿವು, ಬಡತನ, ಅಪೌಷ್ಟಿಕತೆ ಹಾಗೂ ತಾರತಮ್ಯ ಬದುಕಿನ ಹಕ್ಕಿನಿಂದ ವಂಚಿತರಾಗಬಾರದು. ಜತೆಗೆ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದೆಂಬ ಮಹತ್ವಾಕಾಂಕ್ಷೆ ಹೊತ್ತು ರೂಪಿಸಿ ಯೋಜನೆ ಜಾರಿಗೆ ತಂದದ್ದನ್ನು ಆಡಳಿತಾರೂಢ ಸರ್ಕಾರಗಳು ಸಮರ್ಪಕವಾಗಿ ನಿರ್ವಹಿಸದೆ ಖಾಸಗಿ ಕಂಪನಿಗಳಿಗೆ ನೀಡಿ ಕೈತೊಳೆದುಕೊಳ್ಳುತ್ತಿರುವುದು ಖಂಡನೀಯ ಎಂದರು.
ಬಾಲಕೃಷ್ಣ ಜಾಡಬಂಡಿ ಮಾತನಾಡಿದರು. ಇದಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳು ಸರ್ಕಾರದ ನೀತಿ ಖಂಡಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ವಿಶೇಷ ತಹಸೀಲ್ದಾರ್ ಕಚೇರಿಗೆ ಆಗಮಿಸಿ, ಸಿಬ್ಬಂದಿಗೆ ಮನವಿ ಸಲ್ಲಿಸಿದರು. ನಗರ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಆರ್.ಡಿ. ಮಾನವ್ವ, ನಗರ ಸಮಿತಿ ಸಹಕಾರ್ಯದರ್ಶಿ ಶಿವಾಜಿ ಗಡ್ಡದ, ಪ್ರಕಾಶ್ ಹೆಳವರ, ಶರಣಯ್ಯ ಸೂಗಿರಯ್ಯನಮಠ, ಸವಿತಾ ಮುಂದಿನಮನಿ, ಕವಿತಾ ಗದಗ, ಕಾವೇರಿ ಹಳ್ಳದ, ವಿದ್ಯಾ ನಾಯಕ, ವೀರೇಶ ಚಿತ್ತರಗಿ, ಹುಲಿಗೆವ್ವ ಗಡ್ಡದ ಪಾಲ್ಗೊಂಡಿದ್ದರು.