ಜಿಲ್ಲಾದ್ಯಂತ ಸಂಭ್ರಮದ ರಕ್ಷಾಬಂಧನ
ಗದಗ: ಸಹೋದರ-ಸಹೋದರಿಯರ ನೆಚ್ಚಿನ ರಕ್ಷಾ ಬಂಧನ ಹಬ್ಬವನ್ನು ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ನೂಲಹುಣ್ಣಿಮೆ ಬಂದರೆ ಸಾಕು ಎಲ್ಲರಿಗೂ ನೆನಪಾಗುವುದು ಈ ರಕ್ಷಾಬಂಧನ. ಈ ರಕ್ಷಾ ಬಂಧನ ಪರಸ್ಪರಲ್ಲಿ ಸಹೋದರತೆಯನ್ನು ಬೆಳೆಸುವ ಹಬ್ಬವಾಗಿದೆ. ಈ ಹಬ್ಬದ ವಿಶೇಷವೆಂದರೆ ಕೇವಲ ರಕ್ತ ಸಂಬಂಧಿಗಳು ಮಾತ್ರ ಸಹೋದರರಾಗಿರದೇ ನಮ್ಮ ಸುತ್ತಮುತ್ತಲಿನ ಜನರಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವದ ಸಂಬಂಧವನ್ನು ಬೆಳೆಸುವುದು.
ನಗರದ 18ನೇ ವಾರ್ಡನ್ ನಗರಸಭೆ ಸದಸ್ಯೆ ಹಾಗೂ ಎಚ್.ಕೆ. ಪಾಟೀಲ ಮಹಿಳಾ ಸಂಘದ ಅಧ್ಯಕ್ಷೆ ಖಮರಸುಲ್ತಾನ್ ನಮಾಜಿ ಹಾಗೂ ಸಂಘದ ಮಹಿಳಾ ಪದಾಧಿಕಾರಿಗಳು ಗದಗನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಆರೋಪಿಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು.
ಜೀವನಸಾಬ ನಮಾಜಿ ಹಾಗೂ ಎಂ.ಎಂ. ನಾಯ್ಕರ ಮಾತನಾಡಿ, ಜೀವನದಲ್ಲಿ ತಪ್ಪು ಮಾಡುವುದು ಸಹಜ. ಆದರೆ, ಅದೇ ತಪ್ಪು ಪುನರಾವರ್ತನೆ ಆಗದಂತೆ ನಡೆದುಕೊಳ್ಳಬೇಕು. ಮಾನವನ ಜೀವನ ಅಮೂಲ್ಯವಾಗಿದ್ದು, ಅದನ್ನು ಒಳ್ಳೆಯ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರಾಗೃಹದ ಹಿರಿಯ ಅಧಿಕಾರಿ ಕೆ.ಎಸ್. ಮಾನವಿ ಹಾಗೂ ಸಿಬ್ಬಂದಿ, ಎಚ್.ಕೆ. ಪಾಟೀಲ ಮಹಿಳಾ ಸಂಘದ ಪದಾಧಿಕಾರಿಗಳಾದ ಮಲ್ಲಮ್ಮ ಬಳ್ಳಾರಿ, ಫಕೀರಮಾ ಬಾಗೋಡಿ, ಅಮೀನಬಿ ಮೂಲಿಮನಿ, ಫಾತಿಮಾ ಕೋಲಾರ, ಸವಿತಾ ಕಡ್ಲಿಪುಡಿ, ಫಾತಿಮಾ ಉಮಚಗಿ, ಆಸ್ಮಾ ಬೆಟಗೇರಿ, ರೇಣವ್ವ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಹಾಗೂ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯ ಸಹಯೋಗದಲ್ಲಿ ಡಿಜಿಎಂ ಕಾಲೇಜಿನಲ್ಲಿ ರಕ್ಷಾಬಂಧನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ರೇಖಾ, ಡಾ. ಎಂ.ವಿ. ಐಹೊಳಿ, ಡಾ. ಶಕುಂತಲಾ ಗಾವರವಾಡ, ಅರುಣುಕುಮಾರ ಡಬಾಲಿ, ಪುಷ್ಪಾವತಿ ಹಿರೇಮಠ, ಚೈತ್ರಲಕ್ಷ್ಮೀ ಕೆ.ಎನ್. ಮುಂತಾದವರು ಉಪಸ್ಥಿತರಿದ್ದರು.
ಇನ್ನರ್‌ವೀಲ್ ಕ್ಲಬ್: ಇನ್ನರವೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಸಮರ್ಥನಂ ಅಂಗವಿಕಲ ಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಿಸಲಾಯಿತು. ಇನ್ನರವೀಲ್ ಕ್ಲಬ್‌ನ ಅಧ್ಯಕ್ಷೆ ಅನ್ನಪೂರ್ಣ ವರವಿ ಮಾತನಾಡಿ, ಸಹೋದರ-ಸಹೋದರಿಯರ ಸ್ನೇಹ ಸೇತುವೆ ಈ ರಕ್ಷಾ ಬಂಧನ. ಆ ಕ್ಷಣದ ನೆನಪು ತವರಿನ ಸಂಬಂಧ ಸದಾಕಾಲ ಹಸಿರಾಗಿರಲು ಸಹೋದರರ ಸ್ನೇಹ ಶ್ರೀರಕ್ಷೆ ಸ್ಥಿರವಾಗಿರಲಿ ಎಂದು ಸಹೋದರಿಯರು ಆಶಿಸುವುದು ಅಷ್ಟೇ ಅಲ್ಲ, ನಮ್ಮಲ್ಲಿರುವ ಕೆಟ್ಟ ಗುಣಗಳು, ಅಸೂಯೇ ಭಾವನೆಗಳನ್ನು ದೂರ ಮಾಡುವ ಸಂದರ್ಭ ಎಂದರು.
ಈ ಸಂದರ್ಭದಲ್ಲಿ ಪ್ರೇಮಾ ಮೇಟಿ, ಸುಲೋಚನಾ ಐಹೋಳಿ, ಮೀನಾಕ್ಷಿ ಸಜ್ಜನ್, ಮಂಗಲಾ ಅಬ್ಬಿಗೇರಿ, ಶಾಂತಾ ನಿಂಬಣ್ಣವರ, ಶಾಂತಾ ಮುಂದಿನಮನಿ, ಸವಿತಾ ಪಾಟೀಲ, ಆಶಾ ಪಟ್ಟಣಶೆಟ್ಟಿ, ಸರೋಜಿನಿ ಹಕ್ಕಾಪಕ್ಕಿ, ವಿದ್ಯಾ ಗಂಜಿಹಾಳ ಮುಂತಾದವರು ಭಾಗವಹಿಸಿದ್ದರು.
ಗದಗ-ಬೆಟಗೇರಿಯ ಹಲವು ಸಂಘ ಸಂಸ್ಥೆಗಳು, ಎನ್‌ಜಿಓ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಮುಂಡರಗಿ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ, ನರೇಗಲ್ಲ ಪಟ್ಟಣ ಪ್ರದೇಶಗಳಲ್ಲಿ ಸಂಭ್ರಮದ ರಕ್ಷಾ ಬಂಧನ ಆಚರಿಸಲಾಯಿತು.
ರೋಣದಲ್ಲಿ ರಕ್ಷಾ ಬಂಧನ ಆಚರಣೆ
ರೋಣ: ನೂಲ ಹುಣ್ಣಿಮೆಯಂದು ಆಚರಿಸುತ್ತಾ ಬರಲಾದ ಪರಸ್ಪರ ಸಹೋದರತ್ವದ ಸಂಬಂಧವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನ ಹಬ್ಬವನ್ನು ರೋಣ ಪಟ್ಟಣದಲ್ಲಿ ಅಲೆಮಾರಿ ಜನಾಂಗದ ಗುಡಿಸಲು ವಾಸಿಗಳಿಂದ ರಾಕಿ ಕಟ್ಟಿಸಿಕೊಂಡು, ಸಿಹಿ ಹಂಚುವುದರೊಂದಿಗೆ ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ ಹಾಗೂ ಸ್ನೇಹಿತರು ವಿಶಿಷ್ಟವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ ಮಾತನಾಡಿ, ಅಲೆಮಾರಿಗಳು ಸೇರಿದಂತೆ ಅನೇಕ ಸಮುದಾಯ ಇಂದು ವಸತಿ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಸತಿ ರಹಿತರು, ನಿರ್ಗತಿಕರಿಗೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಸಿಗುವಂತಾಗಬೇಕು. ಇಲ್ಲಿ ಎಲ್ಲರೂ ಸಮಾನರು. ಮೇಲು, ಕೀಳು ಎಂಬ ಭೇದ ಭಾವ ಮರೆತು ಎಲ್ಲರೊಡನೆ ಅನ್ಯೋನ್ಯತೆಯಿಂದ ಇರಬೇಕು. ಸಹೋದರತ್ವ ಪ್ರತೀಕವಾದ ಹಬ್ಬವನ್ನು ಗುಡಿಸಲು ವಾಸಿಗಳೊಂದಿಗೆ ಆಚರಿಸಿಕೊಳ್ಳುವುದು ಅತೀವ ಸಂತಸ ತಂದಿದೆ ಎಂದರು. ಅಲೆಮಾರಿ ಮಹಿಳೆ ಅನಸವ್ವ, ಪುರಸಭೆ ಮಾಜಿ ಅಧ್ಯಕ್ಷ ಹಿರಿಯಪ್ಪ ಹಲಗಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಪ್ರಕಾಶ ಹೊಸಳ್ಳಿ, ಮಲ್ಲು ಮಾದರ, ಪುರಸಭೆ ಸದಸ್ಯ ಖಾದಿರಸಾಬ ಸಂಕನೂರ ಮುಂತಾದವರು ಉಪಸ್ಥಿತರಿದ್ದರು.