ಮಾಚಿದೇವರ ಯಾತ್ರಾ ಮಹೋತ್ಸವ
ಗಜೇಂದ್ರಗಡ: ಸ್ಥಳೀಯ ಶ್ರೀ ವೀರಗಂಟಿ ಮಡಿವಾಳ ಮಾಚಿದೇವರ ಸಮಾಜ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಶ್ರೀ ಮಡಿವಾಳ ಮಾಚಿ ದೇವರ 31ನೇ ಯಾತ್ರಾ ಮಹೋತ್ಸವ ಬುಧವಾರ ಭಕ್ತರ ಹರ್ಷೋದ್ಘಾರ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ವೇದ ಮೂರ್ತಿ ಗುರುಲಿಂಗಯ್ಯ ಹಿರೇಮಠರವರ ಸಾನ್ನಿಧ್ಯದಲ್ಲಿ ಬೆಳಗ್ಗೆ 5.45ಕ್ಕೆ ಶ್ರೀ ಮಾಚಿದೇವರ ಪಂಚಲೋಹ ಮೂರ್ತಿಗೆ ಮಹಾ ರುದ್ರಾಭಿಷೇಕ ನಡೆಯಿತು. ಬಳಿಕ ಮೂರ್ತಿ ಮೆರವಣಿಗೆಯು ಸುಮಂಗಲಿಯರ ಕಳಶ ಹಾಗೂ ಕುಂಭ ಮೇಳ ಜತೆಗೆ ಸಕಲ ಮಂಗಲ ವಾದ್ಯಗಳೊಂದಿಗೆ ಪಟ್ಟಣದ ಶ್ರೀ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಹಿರೇಬಜಾರ, ಕೊಳ್ಳಿಯವರ ಕತ್ರಿ, ಭಜರಂಗ ವೃತ್ತ, ಬಸವೇಶ್ವರ ವೃತ್ತದ ಮೂಲಕ ಶ್ರೀ ಮಾಚಿದೇವರ ದೇಗುಲ ತಲುಪಿತು. ಯಾತ್ರಾ ಮಹೋತ್ಸವದಲ್ಲಿ ಸಮಾಜದ ಅಧ್ಯಕ್ಷ ದೇವಪ್ಪ ಮಡಿವಾಳರ, ಉಪಾಧ್ಯಕ್ಷ ಮಹಾದೇವಪ್ಪ ಪವಾರ, ಹಾಗೂ ಮಾಜಿ ಅಧ್ಯಕ್ಷ ಚನ್ನಮಲ್ಲಪ್ಪ ಮಡಿವಾಳರ ಸೇರಿದಂತೆ ಸಮುದಾಯದ ಸರ್ವರೂ ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.