ಇಂದು ಷಷ್ಟ್ಯಬ್ದ ಅಭಿನಂದನೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ. 22
ಶೈಕ್ಷಣಿಕ, ಸಾಹಿತ್ಯ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಅಶೋಕ ಬಾಗಮಾರ ಅವರ 61ನೇ ಜನ್ಮದಿನದ ಜತೆಗೆ ಷಷ್ಟ್ಯಬ್ದ ಅಭಿನಂದನಾ ಸಮಾರಂಭವನ್ನು ಆ. 23ರ ಬೆಳಗ್ಗೆ 10 ಗಂಟೆಗೆ ಟಿಟಿಡಿ ಕಲ್ಯಾಣ ಮಂಟಪ ಬಳಿಯ ಅಹಿಂಸಾ ಮಂಟಪದಲ್ಲಿ ಅಭಿಮಾನಿಗಳು ಸಾರ್ವಜನಿಕವಾಗಿ ವಿಜೃಂಭಣೆಯಿಂದ ಆಚರಿಸಲಿದ್ದಾರೆ.
ದಕ್ಷಿಣ ಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ಸನಿಹದ ಗಜೇಂದ್ರಗಡ ಪಟ್ಟಣದ ಧಾರ್ಮಿಕ ಹಿನ್ನೆಲೆಯುಳ್ಳ ದಿ. ದೇವರಾಜ ಭಾಗಮಾರ ಸುಪುತ್ರರಾದ ಅಶೋಕ ಬಾಗಮಾರ ಅವರು ಸೇವಾ ಸಂಸ್ಕಾರ ಮನೋಭಾವನೆಯನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಂಡ ಪರಿಣಾಮ ಕಾಲೇಜಿನಲ್ಲಿ ಶಿಸ್ತಿನ ಸಿಪಾಯಿಯಾಗಿ ಎನ್ಸಿಸಿ ಅಂಡರ್ ಆಫೀಸರ್ ಆಗಿ ದೆಹಲಿಯಲ್ಲಿ ನಡೆಯುವ ರಿಪಬ್ಲಿಕ್ ಡೇ ಫರೇಡ್ನಲ್ಲಿ ಭಾಗವಹಿಸುವ ಮೂಲಕ ದೇಶದ ಗಮನ ಸೆಳೆದಿದ್ದರು.
ಬಿಕಾಂ ಪದವಿ ಮುಗಿಸಿ ಗಜೇಂದ್ರಗಡದಲ್ಲಿ ಬಟ್ಟೆ ಅಂಗಡಿ ವ್ಯವಹಾರದ ಜತೆಗೆ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಳಿಕ ಭಾಗಮಾರ ಸೇವಾ ಸಮಿತಿ ಸಂಘಟನೆ ಹುಟ್ಟು ಹಾಕಿ ಆ ಮೂಲಕ ಖ್ಯಾತ ನೇತ್ರ ತಜ್ಞ ಪದ್ಮಭೂಷಣ ಡಾ. ಎಂ.ಸಿ ಮೋದಿಯವರನ್ನು ಹಲವಾರು ಬಾರಿ ಗಜೇಂದ್ರಗಡ ಪಟ್ಟಣಕ್ಕೆ ಕರೆಯಿಸಿ ಬಡ ರೋಗಿಗಳಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಅನೇಕರ ಬಾಳಿಗೆ ಬೆಳಕಾಗಿದ್ದಾರೆ. ಅಲ್ಲದೆ ಪುಜ್ಯ ತಂದೆಯವರ ಮಾರ್ಗದರ್ಶನದಂತೆ ಕುಷ್ಟ ರೋಗಿಗಳಿಗೆ ಸುಮಾರು 20 ರಿಂದ 25 ವರ್ಷಗಳಿಗೂ ಹೆಚ್ಚು ಕಾಲ ನಿತ್ಯ ಅನ್ನ ದಾಸೋಹ ನಡೆಸುವ ಮೂಲಕ ಅಶೋಕ ಬಾಗಮಾರ ಮಾನವೀಯತೆ ಮೆರೆದಿದ್ದಾರೆ.
1983-84ರಲ್ಲಿ ಗಜೇಂದ್ರಗಡ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದಲ್ಲದೇ ಪುರಸಭೆಯ ಅಧ್ಯಕ್ಷರಾಗಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 1984ರಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ ಸಂದರ್ಭದಲ್ಲಿ ಬಾಗಮಾರ ಸೇವಾ ಸಮಿತಿ ಮೂಲಕ ಗೋಶಾಲೆ ಸ್ಥಾಪಿಸಿ ಸಾವಿರಾರು ದನ ಕರುಗಳನ್ನು ಇಂದಿಗೂ ಸಾಕುತ್ತಿದ್ದಾರೆ. ಹೀಗೆ ಹತ್ತು ಹಲವು ಜನಪರ ಸಾಮಾಜಿಕ ಚಿಂತನೆಯಲ್ಲಿ ತೊಡಗಿರುವ ಅಶೋಕ ಬಾಗಮಾರರವರ ಸೇವಾ ಮನೋಭಾವನೆ ಗುರುತಿಸಿ ಹಲವಾರು ಸೇವಾ ಪುರಸ್ಕಾರ ಅರಸಿ ಬಂದಿವೆ. ಇಂತಹ ಸಾಮಾಜಿಕ ಚಿಂತನೆಯ ಕಾಯಕ ಯೋಗಿ ಅಶೋಕ ಬಾಗಮಾರ ಸುಪುತ್ರ ಅಜಿತಕುಮಾರ ಬಾಗಮಾರ ಹಾಗೂ ವರ್ಧಮಾನ ಬಾಗಮಾರ ಅವರು ತಂದೆ ನಡೆದು ಬಂದ ದಾರಿಯಲ್ಲಿ ಹಲವಾರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು
ತೊಡಗಿಸಿಕೊಂಡಿರುವುದನ್ನು ಗುರುತಿಸಿದ ಅಸಂಖ್ಯಾತ ಅಭಿಮಾನಿಗಳು ಗಜೇಂದ್ರಗಡ ಪಟ್ಟಣದಲ್ಲಿ ಅಶೋಕ ಬಾಗಮಾರರವರ ಜನ್ಮದಿನೋತ್ಸವ ಹಾಗೂ ಷಷ್ಟ್ಯಬ್ದ ಆಚರಣೆ ಜತೆಗೆ ಬಡ ವೃದ್ಧರಿಗೆ, ವಿಕಲಚೇತನರಿಗೆ, ದುರ್ಬಲ ನಿರ್ಗತಿಕರಿಗೆ ನೆರವು ನೀಡುವುದರ ಜತೆಗೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸೇವಾ ಪುರಸ್ಕಾರ ನೀಡಲು ಮುಂದಾಗಿರುವುದು ಶ್ಲಾಘನೀಯ.