ಕೊಚ್ಚೆಯಾಗಿರುವ ಕಾಯಿಪಲ್ಲೆ ಮಾರುಕಟ್ಟೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 22
ಇಲ್ಲಿ ನೀವು ಒಳಗೆ ಹೋಗಬೇಕಾದಲ್ಲಿ ಮೂಗು ಮುಚ್ಚಿಕೊಂಡೇ ಹೋಗಬೇಕು. ಇಲ್ಲದಿದ್ದರೆ ಮೂರ್ಚೆ ಹೋಗುವುದು ಗ್ಯಾರಂಟಿ.
ಪಟ್ಟಣದ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿರುವ ಕಾಯಿಪಲ್ಲೆ ಮಾರ್ಕೇಟ್ ಅಥವಾ ಭಾನು ಮಾರ್ಕೇಟ್ (ಸೋಮೇಶ್ವರ ವಾಣಿಜ್ಯ ಸಂಕೀರ್ಣ) ಮಳೆ ಬಂದಾಗಲೆಲ್ಲ ಮಳೆಯ ನೀರು ಮಾರುಕಟ್ಟೆ ಪ್ರಾಂಗಣದ ಒಳಗಡೆಯೇ ಬೀಳುತ್ತಿದೆ. ಬಿದ್ದ ನೀರು ಹೋರ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದುರಿಂದ ಗಬ್ಬು ನಾರುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಕಾಯಿಪಲ್ಲೆ ಮಾರುಕಟ್ಟೆ ಅಕ್ಷರಶಃ ಕೊಚ್ಚೆಯಂತಾಗಿದೆ. ಇಲ್ಲಿ ಬಿದ್ದಿರುವ ಕಸವು ಕೊಳೆತು ನಾರುತ್ತಿದ್ದು, ಜನತೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಮಹಿಳೆಯರು ಇಲ್ಲಿ ಬಂದು ಕಾಯಿಪಲ್ಲೆ ತೆಗೆದುಕೊಂಡು ಹೋಗಲು ಪ್ರಯಾಸ ಪಡುತ್ತಿದ್ದಾರೆ. ಇದು ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆಗೆ ಬಂದಿರುವ ದುಸ್ಥಿತಿ. ಕೋಟ್ಯಂತರ ಹಣ ವೆಚ್ಚ ಮಾಡಿ 2006-07ರಲ್ಲಿ ಐಟಿಎಸ್ಎಂಟಿ ಯೋಜನೆಯಡಿ ನಿರ್ಮಿಸಿರುವ ಸೋಮೇಶ್ವರ ವಾಣಿಜ್ಯ ಸಂಕೀರ್ಣ ಅಥವಾ ಕಾಯಿಪಲ್ಲೆ ಮಾರುಕಟ್ಟೆಯ 2 ಅಂತಸ್ತುಗಳ ಈ ಕಟ್ಟಡವು ನಿರ್ಮಾಣ ಮಾಡಿದ ಕೆಲವೇ ವರ್ಷಗಳಲ್ಲಿ ಸಾಕಷ್ಟು ಕಡೆ ಬಿರುಕು ಬಿಟ್ಟು ಸೋರುತ್ತಿದೆ.
ಕಳಪೆ ಕಾಮಗಾರಿ: ಮಾರುಕಟ್ಟೆಯ ಒಳಗಡೆ ನಿರ್ಮಿಸಿರುವ ಬಹಳಷ್ಟು ಅಂಗಡಿಗಳು ಸೋರುತ್ತವೆ. ಈ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಿರುವ ಬಾಡಿಗೆದಾರರು ಜೀವ ಕೈಯಲ್ಲಿ ಹಿಡಿದುಕೊಂಡು ವ್ಯಾಪಾರ ಮಾಡಬೇಕಾಗಿದೆ. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಈ ಕಟ್ಟಡವು ಕಟ್ಟಿದ 4-5 ವರ್ಷಗಳಲ್ಲಿ ಮೇಲ್ಚಾವಣಿಯಲ್ಲಿಯೇ ಬಿರುಕು ಬಿಟ್ಟು ಸೋರುತ್ತಿದೆ.
ಇದು ಕಳಪೆ ಕಾಮಗಾರಿಗೆ ಸಾಕ್ಷಿ. ಅಲ್ಲದೆ ಕಟ್ಟಡ ನಿರ್ಮಿಸುವಾಗ ಇದ್ದ ನೀಲ ನಕ್ಷೆಯ ಪ್ರಕಾರ, ಕಟ್ಟಡದ ಮೇಲ್ಭಾಗದಲ್ಲಿ ಕಬ್ಬಿಣದ ಕಂಚಿಗಳನ್ನು ನಿರ್ಮಿಸಿ, ಅದರ ಮೇಲೆ ತಗಡಿನ ಹೊದಿಕೆಯನ್ನು ಹಾಕುವುದರಿಂದ ಮಳೆಗಾಲದಲ್ಲಿ ಬಿದ್ದ ನೀರು ಕಟ್ಟಡದ ಒಳಗಡೆ ಬೀಳದೆ ಹೊರ ಹೋಗಬೇಕು ಎನ್ನುವುದು ಮೂಲ ಯೋಜನೆಯಾಗಿತ್ತು. ಆದರೆ ಕಾಮಗಾರಿ ಮಾಡುವಾಗ ಕಂಚಿಗಳನ್ನು ನಿರ್ಮಾಣ ಮಾಡದೇ, ಒಳಗಡೆ ಸಣ್ಣ ತಗಡಿನ ಶೆಡ್ ನಿರ್ಮಿಸಿದ್ದಾರೆ. ಹೀಗಾಗಿ ಮಳೆಗಾಲದಲ್ಲಿ ಮಳೆಯ ನೀರು ಕಟ್ಟಡದಿಂದ ಹೊರಗೆ ಹೋಗಲು ಸರಿಯಾದ ವ್ಯವಸ್ಥೆ ಮಾಡದೇ ಇರುವುದರಿಂದ ನೀರು ಕಾಯಿಪಲ್ಲೆ ಮಾರುವ ಸ್ಥಳದಲ್ಲಿ ಬಿದ್ದು ಗಲೀಜು ಉಂಟಾಗಿ ಗಬ್ಬೆದ್ದು ನಾರುತ್ತಿದೆ. ಒಳಗೆ ಬರುವ ಸಾರ್ವಜನಿಕರು ಹಿಡಿಶಾಪ ಹಾಕುತ್ತ ಒಳಗಡೆ ಹೆಜ್ಜೆ ಇಡುತ್ತಿದ್ದಾರೆ.
ಹಂದಿಗಳ ವಾಸಸ್ಥಾನ: ಕಾಯಿಪಲ್ಲೆ ಮಾರುವ ಮುಖ್ಯದ್ವಾರದಲ್ಲಿ ತರಕಾರಿಯ ತಾಜ್ಯ ಹಾಗೂ ಕಸ ಚೆಲ್ಲುವುದರಿಂದ ಮುಖ್ಯ ದ್ವಾರ ಹಂದಿಗಳ ವಾಸಸ್ಥಾನವಾಗಿದೆ. ಈ ಮೊದಲು ಸರ್ಕಾರಿ ಪಿಯು ಕಾಲೇಜು ನಡೆಯುತ್ತಿದ್ದ ಮೊದಲನೆಯ ಅಂತಸ್ತಿನ ಭಾಗವು ಈಗ ಹಾಳಾಗಿದೆ. ಈಗ ಇಲ್ಲಿ ಮದ್ಯದ ಟೆಟ್ರಾ ಪಾಕೇಟ್ಗಳು ಹೇರಳವಾಗಿ ಸಿಗುತ್ತವೆ. ಮೇಲ್ಗಡೆ ಅಂತಸ್ತಿನಲ್ಲಿ ಯಾರೂ ಇಲ್ಲದೇ ಇರುವುದರಿಂದ ಕುಡುಕರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಹೀಗಾಗಿ ಈ ಭಾನು ಮಾರುಕಟ್ಟೆಯು ಈಗ ಅವ್ಯವಸ್ಥೆಯ ಆಗರವಾಗಿದೆ.
ನಿತ್ಯ ಸಾವಿರಾರು ಜನರು ಬಂದು ಹೋಗುವ ಈ ಸ್ಥಳದ ಸ್ವಚ್ಛತೆಗೆ ಮುಂದಾಗದೇ ನಿರ್ಲಕ್ಷ್ಯವಹಿಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪುರಸಭೆಯ ಆಡಳಿತ ಮಂಡಳಿ, ಮುಖ್ಯಾಧಿಕಾರಿ ಅಥವಾ ಜಿಲ್ಲಾಧಿಕಾರಿ ಭಾನು ಮಾರುಕಟ್ಟೆಯ ಅವ್ಯವಸ್ಥೆಯನ್ನು ಸರಿಪಡಿಸಲು ಇನ್ನಾದರೂ ಗಮನ ಹರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
-ಅಶೋಕ ಸೊರಟೂರ