ತರಕಾರಿ ಬಲು ದುಬಾರಿ!
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ. 22
ಕಳೆದ ಹಂಗಾಮಿನಲ್ಲಿ ತರಕಾರಿ ಬೆಳೆದ ರೈತರು ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಿದ್ದರು. ಇದರಿಂದ ರೈತರು ಈ ಬಾರಿ ತರಕಾರಿ ಬದಲಿಗೆ ವಾಣಿಜ್ಯ ಬೆಳೆ ಬೆಳೆಯಲು ಮುಂದಾದ ಪರಿಣಾಮ ಪ್ರಸ್ತುತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.
ಇದು ಕಾಯಿಪಲ್ಲೆ ಖರೀದಿಸಲು ಮಾರುಕಟ್ಟೆಗೆ ಬರುವ ಗ್ರಾಹಕರಿಗೆನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಸ್ಥಳೀಯ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ರು. 80, ಟಮೇಟೊ ರು. 30, ಆಲೂಗಡ್ಡೆ ರು. 30, ಗಜ್ಜರಿ ರು. 40, ಇನ್ನುಳಿದ ಕಾಯಿಪಲ್ಲೆಗಳ ಬೆಲೆಯೂ ನಾಮುಂದು, ತಾಮುಂದು ಎಂಬಂತೆ ನಿತ್ಯ ಏರುತ್ತಲೇ ಇವೆ. ಜನ ಸಾಮಾನ್ಯರು ಹೆಚ್ಚಿದ ತರಕಾರಿ ದರದಿಂದ ಕೊಂಡಕೊಳ್ಳಲು ಹೆಣಗಾಡುತ್ತಿದ್ದಾರೆ.
ಈಗ ಹಬ್ಬಗಳ ಸೀಜನ ಬೇರೆ ಶುರುವಾಗಿರುವುದರಿಂದ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಗ್ರಾಹಕರ ಬದುಕು ದುಸ್ತರವಾಗಿದೆ.
ಮುಂಗಾರು ಹಂಗಾಮಿನಲ್ಲಾದ ಆಹಾರ ಧಾನ್ಯ ಉತ್ಪಾದನೆ ಕೊರತೆಯನ್ನು ಹಿಂಗಾರಿ ಹಂಗಾಮಿನಲ್ಲಿ ಭರ್ತಿ ಮಾಡಿಕೊಳ್ಳುವ ವಿಶ್ವಾಸವನ್ನು ಕೃಷಿ ಸಚಿವಾಲಯ ವ್ಯಕ್ತಪಡಿಸಿದೆ. ಆದರೂ ಇದಕ್ಕೆ ಹಿಂಗಾರಿನಲ್ಲಿ ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗುವ ಸಾಧ್ಯತೆ ಕಡಿಮೆ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದ್ದು, ಸರ್ಕಾರ ಹಿಂಗಾರು ಹಂಗಾಮು ಪೂರ್ಣಗೊಳ್ಳುವವರೆಗೆ ಕಾಯದೇ ಆಹಾರ ಧಾನ್ಯಗಳ ಸಾಕಷ್ಟು ಪೂರೈಕೆ ಮತ್ತು ಬೆಲೆ ನಿಯಂತ್ರಣಕ್ಕೆ ಈಗಿನಿಂದಲೇ ಕಾರ್ಯಪ್ರವೃತ್ತವಾಗಬೇಕು ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ಕಾಳಸಂತೆಕೋರರಿಗೆ ಸಹಕಾರಿ: ಸತತ ಬರದಿಂದ ತತ್ತರಿಸಿರುವ ಜನತೆಗೆ ಈಗ ಮತ್ತೊಂದು ಆಘಾತ ಕಾದಿದೆ. ಮಳೆ ಅಭಾವದಿಂದಾಗಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆಹಾರ ಧಾನ್ಯ ಉತ್ಪಾದನೆ ಕಡಿಮೆಯಾಗಲಿದೆ ಎಂದು ಕೃಷಿ ಸಚಿವಾಲಯ ಅಂದಾಜು ಮಾಡಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆ ಮತ್ತಷ್ಟು ಏರುವುದು ಖಚಿತ. ಡೀಸೆಲ್ ಬೆಲೆ ಏರಿಕೆ ಪರಿಣಾಮ ಈಗಾಗಲೇ ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ. ಇದರ ಜತೆಗೆ ಆಹಾರ ಧಾನ್ಯ ಉತ್ಪಾದನೆ ಕಡಿಮೆಯಾಗುವ ಸರ್ಕಾರದ ಪ್ರಕಟಣೆ ಹೊರ ಬಿದ್ದಿರುವುದರಿಂದ ಕಾಳಸಂತೆಕೋರರಿಗೆ ಉತ್ತಮ ಅವಕಾಶ ದೊರೆತಂತಾಗಿದೆ. ಹಬ್ಬಗಳ ಹಂಗಾಮಿನಲ್ಲಿ ಆಹಾರ ಧಾನ್ಯಗಳಿಗೆ ಬರುವ ದಿನಗಳಲ್ಲಿ ಬೇಡಿಕೆ ಹೆಚ್ಚುವುದು ಸಹಜ. ಹೀಗಾಗಿ ವರ್ಷದ ಈ ಸಂದರ್ಭದಲ್ಲಿ ಬೆಲೆ ಹೆಚ್ಚಳವಾಗುವುದು ಸಾಮಾನ್ಯ. ಆದರೆ, ಈ ಬಾರಿ ಬೆಲೆ ನೀರಿಕ್ಷೆಗೂ ಮೀರಿ ಹೆಚ್ಚಾಗಿರುವುದು ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಮಧ್ಯೆ ಜಾಗತಿಕ ಮಾರುಕಟ್ಟೆಗಳಲ್ಲಿ ಆರ್ಥಿಕ ಸೂಚ್ಯಂಕ ನಿಯಂತ್ರಣ ಅಯೋವುಯವಾದ ಪರಿಣಾಮ ಸರ್ಕಾರ ಪದೇಪದೇ ಪೆಟ್ರೋಲಿಯಂ ಉತ್ಪನ್ನ, ಅಡುಗೆ ಅನಿಲ ಬೆಲೆ ಸೇರಿದಂತೆ ನಿತ್ಯ ಅವಶ್ಯಕ ವಸ್ತುಗಳ ಬೆಲೆ ಏರಿಕೆಯು ಶ್ರೀ ಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರುವುದರ ಜತೆಗೆ ಆರ್ಥಿಕ ತಜ್ಞರ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ, ಸಾಮಾನ್ಯ ಜನರ ಬದುಕನ್ನು ಸುಗಮಗೊಳಿಸದಿದ್ದರೆ ಜನತೆ ಸರ್ಕಾರದ ಮೇಲೆ ಇಟ್ಟ ವಿಶ್ವಾಸವನ್ನು ಕಳೆದುಕೊಳ್ಳುವುದು ಖಂಡಿತ.
--