ನಾಗರಾಜ ಛಬ್ಬಿ ಗೆಲವು ನಿಶ್ಚಿತ: ಎಚ್ಕೆ ವಿಶ್ವಾಸ
ಕನ್ನಡಪ್ರಭ ವಾರ್ತೆ, ಗದಗ, ಆ. 22
ಗುರುವಾರ ಜರುಗಿದ ವಿಪ ಉಪಚುನಾವಣೆಯಲ್ಲಿ ಕಾಂಗ್ರೆಸ್‌ದಿಂದ ಸ್ಪರ್ಧಿಸಿರುವ ನಾಗರಾಜ ಛಬ್ಬಿ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಗುರುವಾರ ನಗರದ ತಾಪಂ ಮತಗಟ್ಟೆಯಲ್ಲಿ ಮತದಾನ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ಥಳೀಯ ವಿಧಾನ ಪರಿಷತ್‌ನ ಉಪಚುನಾವಣೆಗೆ ಗದಗ-ಬೆಟಗೇರಿ ನಗರಸಭೆ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಪಂ, ನಗರಸಭೆ, ಪುರಸಭೆ, ತಾಪಂ, ಪಪಂ, ಗ್ರಾಪಂ ಸದಸ್ಯರು ಮತದಾನ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಬೆಂಬಲವಿದೆ. ಇದು ಅಭ್ಯರ್ಥಿ ನಾಗರಾಜ ಛಬ್ಬಿಗೆ ಶ್ರೀರಕ್ಷೆಯಾಗಲಿದೆ.
ಜಿಲ್ಲೆಯಾದ್ಯಂತ ಗಮನಿಸಿದಲ್ಲಿ ಪಕ್ಷಕ್ಕೆ ಉತ್ತಮ ಬೆಂಬಲವಿರುವುದು ಕಂಡು ಬರುತ್ತಿದೆ. ಗದಗ ತಾಲೂಕಿನ ಸುಮಾರು 10 ಗ್ರಾಪಂಗಳಲ್ಲಿ ಶೇ. 100ಕ್ಕೆ 100 ರಷ್ಟು ಮತದಾನ ಕಾಂಗ್ರೆಸ್ ಪಕ್ಷಕ್ಕೆ ಆಗಲಿದೆ. ಒಟ್ಟಾರೆ ಜಿಲ್ಲೆಯನ್ನು ಹೋಲಿಸಿದಲ್ಲಿ ಶೇ. 80 ರಷ್ಟು ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ: ಕಾಂಗ್ರೆಸ್‌ಗೆ ಲಾಭ
ಕೆಲವು ದಿನಗಳ ಹಿಂದೆ ಬಿಜೆಪಿ-ಕೆಜೆಪಿ, ಬಿಜೆಪಿ-ಜೆಡಿಎಸ್ ಕೂಡಿ ಮೈತ್ರಿ ಮಾಡಿಕೊಂಡು ಚುನಾವಣೆ ನಡೆಸಲಿವೆ ಎಂದು ಹೇಳಿಕೆ ನೀಡಿದ್ದವು. ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದಲ್ಲಿ ಜೆಡಿಎಸ್‌ನಲ್ಲಿ ಹಾಗೂ ಕೆಜೆಪಿಯಲ್ಲಿರುವ ಅಲ್ಪಸಂಖ್ಯಾತರು, ಜಾತ್ಯಾತೀತ ಮನೋಭಾವ ಹೊಂದಿರುವ ಮತದಾರರು ಜೆಡಿಎಸ್, ಕೆಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲಿದ್ದಾರೆ. ಇವರ ಮೈತ್ರಿ ಕಾಂಗ್ರೆಸ್‌ಗೆ ಲಾಭವಾಗಿ ಪರಿಣಮಿಸಲಿದೆ ಎಂದರು.