ಸದ್ಭಾವನಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಗದಗ, ಆ. 22
ಸಹೋದರತೆಯ ಮಹೋನ್ನತಿ ಹಾಗೂ ಈ ದೇಶದ ವಿಭಿನ್ನತೆಯನ್ನು ಸಂರಕ್ಷಿಸುವಂತೆ ಪ್ರಾಚಾರ್ಯ ಬಿ.ಆರ್. ಜಾಲಿಹಾಳ ಯುವಕರಿಗೆ ಕರೆ ನೀಡಿದರು.
ಅವರು ಈಚೆಗೆ ನಗರದ ಕೆ.ವಿ.ಎಸ್.ಆರ್. ಹಾಗೂ ಸಂಕೇತ ಪದವಿಪೂರ್ವ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಭಿನ್ನ, ಭಾಷೆ, ಧರ್ಮ, ವೇಷ-ಭೂಷಣಗಳಿಗೆ ನಮ್ಮ ದೇಶ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಈ ಹಿರಿಮೆಯನ್ನು ಹೆಚ್ಚಿಸಲು ನಾವೆಲ್ಲ ಸದ್ಭಾವನೆಯೊಂದಿಗೆ ಬದುಕುವುದರೊಂದಿಗೆ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಸಂಕೇತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಕಾಶಪ್ಪನವರ ಮಾತನಾಡಿ, ಭಾರತದಂತಹ ಅರ್ಥಪೂರ್ಣ ದೇಶದಲ್ಲಿ ಬದುಕುತ್ತಿರುವುದು ನಮ್ಮ ಪುಣ್ಯ, ಇಂತಹ ದಿನಾಚರಣೆಗಳು ನಮ್ಮ ಪ್ರಜ್ಞೆ ಹಾಗೂ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದರು.
ದೈಹಿಕ ಶಿಕ್ಷಣ ಉಪನ್ಯಾಸಕ ವಿ.ಎನ್. ಮರೇಗುದ್ದಿ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.