ಇಂದು ಕಸಾಪ ಉಪನ್ಯಾಸ
ಗದಗ: ನಗರದ ತಾಪಂ ಆವರಣದಲ್ಲಿರುವ ಗದಗ ಕಸಾಪ ಕಾರ್ಯಾಲಯದಲ್ಲಿ ಆ. 24ರಂದು ಸಂಜೆ 6 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ಗದಗ ಶಹರ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಸಾಹಿತಿ ಶಿವಾನಂದ ಗಿಡ್ನಂದಿ ಅವರು ರಾಘವಾಂಕನ ಹರಿಶ್ಚಂದ್ರ ಕಾವ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ. ನೀರಲಗಿಯ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ವಿಜಯ ಕಿರೇಸೂರ ಕಾವ್ಯವಾಚನವನ್ನು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ವಹಿಸುವರು. ಕಾರಣ ಕಸಾಪದ ಆಜೀವ ಸದಸ್ಯರು, ಸಾಹಿತ್ಯಾಭಿಮಾನಿಗಳು, ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದಾಯ ತೆರಿಗೆ ವಿಚಾರ ಸಂಕಿರಣ
ಗದಗ: ರಾಜ್ಯ ಸನ್ನದು ಲೆಕ್ಕ ಪರಿಶೋಧಕರ ಸಂಘ ಬೆಂಗಳೂರ, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಗದಗ ಜಿಲ್ಲಾ ತೆರಿಗೆ ಸಲಹೆಗಾರರ ಸಂಘ, ಗದಗ ಚಾಪ್ಟರ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಆ. 24ರ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8.30 ಗಂಟೆಯ ವರೆಗೆ 1 ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಮೌಲ್ಯವರ್ಧಿತ ತೆರಿಗೆ ಹಾಗೂ ಅದರಲ್ಲಿ ಆದ ಬದಲಾವಣೆಗಳ ವಿಷಯವಾಗಿ ಬೆಂಗಳೂರಿನ ನವೀನ ರಾಜಪುರೋಹಿತ ಅವರು ಮಾತನಾಡುವರು. ಬೆಂಗಳೂರಿನ ಲೆಕ್ಕ ಪರಿಶೋಧಕ ಡಿ.ಆರ್.ವೆಂಕಟೇಶ ಇವರು ಆದಾಯಕರ ಕಾನೂನಿನನ್ವಯ ಅಡಿಟ್ ಹಾಗೂ ಟಿ.ಡಿ.ಎಸ್. ಬಗ್ಗೆ ಮಾತನಾಡುವರು. ಈ ವಿಚಾರ ಸಂಕಿರಣದ ಉದ್ಘಾಟನೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಚಂದ್ರಶೇಖರ ದಳವಗಿ ಭಾಗವಹಿಸುವರು. ಈ ಸಭೆಯಲ್ಲಿ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ವೀರೇಶ ಕೂಗು, ಲೆಕ್ಕ ಪರಿಶೋಧಕ ಸಂಘದ ಅಧ್ಯಕ್ಷ ಎಂ.ಆರ್. ಬಂಗಾರಿ, ಕೆ.ಎಸ್. ಚಟ್ಟಿ, ಬಿ.ಜಿ. ಶೆಲ್ಲಿಕೇರಿ, ವಿರೂಪಾಕ್ಷಪ್ಪ ತುಪ್ಪದ, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಸುರಕೋಡ ಭಾಗವಹಿಸಲಿದ್ದಾರೆ ಎಂದು ಸಂಯೋಜಕ ಆನಂದ ಪೊತ್ನೀಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--