ಕ್ರೀಡಾ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನ
ಕನ್ನಡಪ್ರಭ ವಾರ್ತೆ, ಗದಗ, ಆ. 23
ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಎಂಬಂತೆ ಮಾನಸಿಕ ಮತ್ತು ದೈಹಿಕವಾದ ಪರಿಪಕ್ವತೆ ಹೊಂದುವುದರ ಮೂಲಕ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಗದಗ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ದೈಹಿಕ ಶಿಕ್ಷಣದ ನಿರ್ದೇಶಕಿ ಡಾ. ಶಾರದಾ ನಿಂಬರಗಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಅಥ್ಲೆಟಿಕ್ ಕ್ರೀಡಾಕೂಟದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸತತ ಪರಿಶ್ರಮವಿರಲಿ
ಉತ್ತಮವಾದ ಮಾನಸಿಕ, ದೈಹಿಕ ಆರೋಗ್ಯವನ್ನು ಸಂಪಾದಿಸಿಕೊಳ್ಳಬೇಕಾದರೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ, ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಯಾರು ಹುಟ್ಟಿನಿಂದ ಅಸಮರ್ಥರಲ್ಲ. ಸತತ ಪರಿಶ್ರಮದಿಂದ ಒಳ್ಳೆಯ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಿ. ಕ್ರೀಡಾ ಸ್ಪರ್ಧೆಗಳಲ್ಲಿ ಗೆಲವು, ಸೋಲು ಮುಖ್ಯವಲ್ಲ ಅದರಲ್ಲಿ ಸ್ಪರ್ಧಿಸುವ ಮನೋಭಾವನೆ, ಆಸಕ್ತಿ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಿ.ಬಿ. ಗೌಡರ, ಪ್ರತಿಯೊಬ್ಬ ಯುವಕರು ಕ್ರೀಡಾ ಚಟುವಟಿಕೆಯಲ್ಲಿ ಉತ್ಸಾಹ, ಸ್ವಸಾಮರ್ಥ್ಯದ ಮೂಲಕ ಪಾಲ್ಗೊಂಡು ತಮ್ಮ ಕ್ರೀಡಾ ಬದುಕಿನ ಚೈತನ್ಯವನ್ನು ಹೆಚ್ಚಿಸಿಕೊಂಡಲ್ಲಿ ವೈಯಕ್ತಿಕವಾಗಿ ನಿಮ್ಮ ಗುರಿ, ಸಾಧನೆ ಮಾಡುವ ವ್ಯಕ್ತಿತ್ವ ನಿಮ್ಮದಾಗುತ್ತದೆ ಎಂದರು. ಐಶ್ವರ್ಯ ಅಗಸಿಮನಿ ಪ್ರಾರ್ಥಿಸಿದರು. ಪ್ರೊ. ಸಿ.ಎಂ. ಕಾಳನ್ನವರ ಸ್ವಾಗತಿಸಿದರು. ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಂಬರೀಶ ಗುಡ್ಡ ನಿರೂಪಿಸಿದರು.