ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ ಜಿಲ್ಲೆಗೆ 16 ವರ್ಷ, ಇನ್ನೂ ಮೂಡಿಲ್ಲ ಹರ್ಷ

Lingaraj Badiger
Updated On : 24 Aug 2013, 12:06 pm

ಕನ್ನಡಪ್ರಭ ವಾರ್ತೆ, ಗದಗ, ಆ. 23
ಗದಗ ಜಿಲ್ಲೆಯಾಗಿ ರೂಪುಗೊಂಡು ಆ. 24ಕ್ಕೆ 16 ವರ್ಷ ಪೂರ್ಣಗೊಂಡಿದೆ. ಆದರೆ, ಜಿಲ್ಲೆಯಾಗಿ ಘೋಷಣೆಯಾಗುವ ಪೂರ್ವದಲ್ಲಿದ್ದ ಹಲವಾರು ಶಾಶ್ವತ ನೀರಾವರಿ ಯೋಜನೆಗಳು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಅಂದುಕೊಂಡಷ್ಟು ಪ್ರಮಾಣದಲ್ಲಿ ಸಾಗಿಲ್ಲ ಎನ್ನುವುದು ಜಿಲ್ಲೆಗೆ ಭೇಟಿ ಮಾಡಿದ ಪ್ರತಿಯೊಬ್ಬರಿಗೂ ತಿಳಿಯುವ ಸತ್ಯ.
ಗದಗವನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಧಾರವಾಡ ಜಿಲ್ಲಾ ಕೇಂದ್ರವಾಗಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎನ್ನುವ ನೋವು ಬಹಳ ವರ್ಷಗಳಿಂದಿತ್ತು. ಅದಕ್ಕೆ ಅಂತಿಮ ಸ್ವರೂಪ ಮತ್ತು ಹೋರಾಟಕ್ಕೆ ಕಿಚ್ಚು ಬಂದು 1996ರ ಅಕ್ಟೋಬರ್ ತಿಂಗಳಲ್ಲಿ ಅಲ್ಲಲ್ಲಿ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು. ಗದಗ, ಬೆಟಗೇರಿ ಅವಳಿ ನಗರದಲ್ಲಿ ಒಂದು ವಾರದ ಕಾಲ ಕರ್ಫ್ಯೂ ವಿಧಿಸಿ ಜನ ಜೀವನವೇ ಅಸ್ಥಿರಗೊಂಡಿತ್ತು. ಈ ಹೋರಾಟ ರಾಜ್ಯದ ಗಮನವನ್ನೇ ಸೆಳೆದಿತ್ತು.
ಆಗಸ್ಟ್ 24, 1997ರಂದು ಘೋಷಣೆ: ಈ ಹೋರಾಟ ಮತ್ತು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದ್ದ ನೂತನ ಜಿಲ್ಲೆಯನ್ನು 24-8-1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಘೋಷಣೆ ಮಾಡಿದರು. ಅಂದು ಉದಯವಾದ ಜಿಲ್ಲೆ ಇಂದಿಗೂ ಸಮಸ್ಯೆಗಳ ಸುಳಿಯಲ್ಲಿಯೇ ಸಾಗುತ್ತಿದೆ. ಭೌಗೋಳಿಕವಾಗಿ ಅತ್ಯಂತ ಚಿಕ್ಕ ಜಿಲ್ಲೆಯಾದ ಗದಗ 5 ತಾಲೂಕುಗಳನ್ನು ಒಳಗೊಂಡಿದ್ದು, ಜಿಲ್ಲೆಯ ಒಂದು ಬದಿ ತುಂಗಭದ್ರಾ ಮತ್ತೊಂದು ಬದಿ ಮಲಪ್ರಭಾ ನದಿ ಹರಿಯುತ್ತಿದ್ದರೂ ಜಿಲ್ಲೆ ಸಂಪೂರ್ಣ ಒಣಬೇಸಾಯ ಪದ್ಧತಿಯನ್ನೇ ಆಧರಿಸಿದೆ. ಪ್ರಮುಖ ನೀರಾವರಿ ಯೋಜನೆಗಳಾದ ಸಿಂಗಟಾಲೂರ ಏತ ನೀರಾವರಿ, ಕಳಸಾ ಬಂಡೂರಿ, ಮಹದಾಯಿ ಯೋಜನೆಗಳು 2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದು, ರೈತರ ಜಮೀನುಗಳಿಗೆ ಮಾತ್ರ ನೀರು ಲಭ್ಯವಾಗಿಲ್ಲ.
ಶಿಕ್ಷಣ, ಉದ್ಯೋಗಕ್ಕಿಲ್ಲ ಆದ್ಯತೆ: ಪ್ರತಿ ವರ್ಷ 25 ಸಾವಿರಕ್ಕೂ ಹೆಚ್ಚು ಜನರು ಕೆಲಸ ಅರಸಿ ದೂರದ ಗೋವಾ, ಮಂಗಳೂರು, ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದು, ಇದರಿಂದ ಅವರ ಮಕ್ಕಳು ಶೈಕ್ಷಣಿಕವಾಗಿ ವಂಚಿತರಾಗುತ್ತಿದ್ದಾರೆ. ಇದಕ್ಕಾಗಿ ಗದಗ ಜಿಲ್ಲೆಯಲ್ಲಿ ಬಡ ಮಧ್ಯಮ ವರ್ಗಗಳಿಗೆ ಉದ್ಯೋಗ ನೀಡುವ, ಮುಖ್ಯವಾಗಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಚಿಂತನೆ ನಡೆಯಬೇಕಿದೆ.

ಇವೆಲ್ಲ ಸಮಸ್ಯೆಗಳಿವೆ...
ಜಿಲ್ಲಾ ಕೇಂದ್ರವಾದ ಗದಗ, ಬೆಟಗೇರಿ ಅವಳಿ ನಗರದಲ್ಲಿ ಮಳೆಗಾಲದಲ್ಲಿಯೇ 15ರಿಂದ 20 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಜಿಲ್ಲೆಯ ಬಹುತೇಕ ರಸ್ತೆಗಳಿಗೆ ಕಾಯಕಲ್ಪ ದೊರೆಯಬೇಕಿದೆ. ಸರ್ಕಾರ ಮತ್ತು ಸಾರಿಗೆ ಇಲಾಖೆ ಸಮರ್ಪಕ ಬಸ್ ಸೇವೆ ನೀಡಲು ಸಾಧ್ಯವಾಗಿಲ್ಲ. ಜಿಲ್ಲೆಯಾಗಿ 16 ವರ್ಷ ಗತಿಸಿದ್ದರೂ 5 ತಾಲೂಕಿನ ವ್ಯಾಪ್ತಿಯ 8 ಗ್ರಾಮಗಳಿಗೆ ಇಂದಿಗೂ ಬಸ್ ಸೌಕರ್ಯವೇ ಇಲ್ಲ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿವ ನೀರಿಗೆ ಸಾಕಷ್ಟು ಸಮಸ್ಯೆ ಇದೆ. ಇದಕ್ಕೆಲ್ಲಾ ಅದ್ಯಾಗ ಪರಿಹಾರ ಸಿಗುವುದೋ ಕಾಯ್ದು ನೋಡಬೇಕಿದೆ.  

ಬಾಕಿ ಉಳಿದಿರುವ ಪ್ರಮುಖ ಕೆಲಸಗಳು
-ರೈತರು ಬೆಳೆದ ಈರುಳ್ಳಿ ಮತ್ತು ಪುಷ್ಪೋದ್ಯಮಕ್ಕೆ ಬೇಕಾಗುವ ಬೃಹತ್ ಶೈತ್ಯಾಗಾರ ನಿರ್ಮಾಣವಾಗಿಲ್ಲ.
-ರೈತರು ಬೆಳೆದ ಪ್ರಮುಖ ಬೆಳೆಗಳನ್ನು ನೇರವಾಗಿ ರಫ್ತು ಮಾಡಲು ರಫ್ತು ವಹಿವಾಟು ಕೇಂದ್ರ ಸ್ಥಾಪನೆಯಾಗಿಲ್ಲ.
-ಸಂಪೂರ್ಣ ಕೃಷಿಯನ್ನೇ ನಂಬಿರುವ ಈ ಜಿಲ್ಲೆಯಲ್ಲಿ ಇಂದಿಗೂ ಒಂದು ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆಯಾಗಿಲ್ಲ.
-ಸಿಂಗಟಾಲೂರ ಮತ್ತು ಕಳಸಾ ಬಂಡೂರಿ, ಮಹದಾಯಿ ಯೋಜನೆಗಳಿಗೆ ವೇಗ ನೀಡಬೇಕಿದೆ.
-ಜಿಲ್ಲೆಯ ರೋಣ ಮತ್ತು ನರಗುಂದ ಹಾಗೂ ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿನ ನೀರಾವರಿ ಕಾಲುವೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.
-ಜಿಲ್ಲೆಯ ಯಾವ ಪಟ್ಟಣಗಳಲ್ಲಿಯೂ ಹೊಸ ಉದ್ಯಾವನ ನಿರ್ಮಿಸಿಲ್ಲ.
-ಬಿಂಕದಕಟ್ಟಿಯಲ್ಲಿರುವ ಪ್ರಾಣಿ ಸಂಗ್ರಹಾಲಯವನ್ನು ಮೇಲ್ದರ್ಜೆಗೇರಿಸಿಲ್ಲ.
-ಕಪ್ಪತ್ತಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿಲ್ಲ.
-ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಪ್ರಯತ್ನಗಳಿಲ್ಲ, ಹಾಲು ಸಂಗ್ರಹಣೆಯಲ್ಲಿ ಜಿಲ್ಲೆ ಅತ್ಯಂತ ಹಿಂದುಳಿದಿದೆ.
-ಜಿಲ್ಲೆಯಲ್ಲಿ ಕೈಮಗ್ಗಗಳ ಅಭಿವೃದ್ಧಿಗೆ ವಿಶೇಷ ಅನುದಾನ, ಪ್ಯಾಕೇಜ್ ದೊರೆತಿಲ್ಲ.
-ಪ್ರವಾಸೋದ್ಯಮ ಅಭಿವೃದ್ಧಿಗೆ ಇನ್ನು ಹೆಚ್ಚಿನ ಗಮನ ನೀಡಬೇಕಾದ ಅವಶ್ಯಕವಾಗಿದೆ.
-ಜಿಲ್ಲೆಯಲ್ಲಿರುವ ಮಾಗಡಿ ಕೆರೆಯನ್ನು ಪ್ರವಾಸಿ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕಿದೆ.
-ಗದಗ-ವಾಡಿ, ಗದಗ-ಹಾವೇರಿ ರೈಲು ಮಾರ್ಗಗಳ ಸಮೀಕ್ಷಾ ಕಾರ್ಯ ಪ್ರಾರಂಭವಾಗಿಲ್ಲ.
-ಗದಗ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕನಸು ನನಸಾಗಿಲ್ಲ.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement