ರಾಯಣ್ಣ ಅಮರ ಜ್ಯೋತಿ ಜಾಥಾ ಇಂದು ರೋಣಕ್ಕೆ
ರೋಣ: ನಾಡಿನ ವೀರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 219ನೇ ಜಯಂತಿ ಅಂಗವಾಗಿ ನಂದಗಡದಿಂದ ಆ. 24ರಂದು ರೋಣ ತಾಲೂಕಿಗೆ ಅಮರ ಜ್ಯೋತಿ ಜಾಥಾ ಆಗಮಿಸಲಿದೆ ಎಂದು ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಆರ್.ಬಿ. ಕುದರಿ ಹೇಳಿದರು. ಅವರು ಗುರುವಾರ ಸಂಜೆ ಪಟ್ಟಣದ ನೀರಾವರಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ. 24ರಂದು ರೋಣ ತಾಲೂಕಿನ ಸರ್ಜಾಪುರ ಗ್ರಾಮಕ್ಕೆ ಬೆಳಗ್ಗೆ 9.30 ಗಂಟೆಗೆ, 10 ಗಂಟೆಗೆ ಬೊಮ್ಮಸಾಗರ, 11 ಗಂಟೆಗೆ ಶಾಂತಗೇರಿ, 12 ಗಂಟೆಗೆ ಮುಶಿಗೇರಿ, 21.30 ಗಂಟೆಗೆ ಚಿಕ್ಕಳಗುಂಡಿ, 1 ಗಂಟೆಗೆ ಹಿರೇಅಳಗುಂಡಿ, 1.30 ಕ್ಕೆ ಇಟಗಿ, 2.30 ಕ್ಕೆ ಸೂಡಿ, 3 ಗಂಟೆಗೆ ರಾಜೂರ, 3.30 ಕ್ಕೆ ಗಜೇಂದ್ರಗಡ, 4 ಗಂಟೆಗೆ ನಿಡಗುಂದಿ, 5 ಗಂಟೆಗೆ ಮಾರನಬಸರಿ, 6 ಕ್ಕೆ ಜಕ್ಕಲಿ, 7 ಕ್ಕೆ ರೋಣ ಪಟ್ಟಣ ಹಾಗೂ 8 ಗಂಟೆಗೆ ಅಬ್ಬಿಗೇರಿ ಗ್ರಾಮಕ್ಕೆ ತೆರಳಲಿದೆ. ಅಬ್ಬಿಗೇರಿಯಲ್ಲಿ ಬಹಿರಂಗ ಸಭೆ ಜರುಗಲಿದೆ ಎಂದರು. ಈ ಸಂದರ್ಭದಲ್ಲಿ ಡಾ. ಎಸ್.ಪಿ. ಗೋವಿಂದಪ್ಪನವರ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟದ ಮೂಲಕ ನಾಡಿನ ಯುವಕರಲ್ಲಿ ದೇಶ ಪ್ರೇಮವನ್ನು ಹುಟ್ಟಿಸಿದ ಕನ್ನಡದ ಗಂಡುಗಲಿ ವೀರ ಸಂಗೊಳ್ಳಿ ರಾಯಣ್ಣ ಹೆಸರನ್ನು ಬೆಳಗಾವಿ ವಿಮಾಣ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಹಾಗೂ ರಾಜ್ಯ ಸರ್ಕಾರ ಕೊಡಮಾಡಲ್ಪಡುವ ಯುವ ಶೌರ್ಯ ಪ್ರಶಸ್ತಿಯನ್ನು ರಾಯಣ್ಣನ ಹೆಸರಿನಲ್ಲಿ ಕೊಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಹಾಲುಮತ ಸಮಾಜದ ತಾಲೂಕು ಉಪಾಧ್ಯಕ್ಷ ಮುದಕಪ್ಪ ಮುಗಳಿ, ನ್ಯಾಯವಾದಿ ವಿ.ಆರ್. ಗುಡಿಸಾಗರ, ರವಿ ದಂಡಿನ, ವಿರೂಪಾಕ್ಷಪ್ಪ ಕರಿವಳ್ಳಿ, ಜಿಪಂ ಸದಸ್ಯ ಆರ್.ಬಿ. ಕೊಂಡಿಕೊಪ್ಪ, ಗ್ರಾ.ಪಂ. ಸದಸ್ಯ ಶರಣಪ್ಪ ಕಂಬಳಿ, ಚನ್ನಬಸಪ್ಪ ಯಲಿಗಾರ, ತಿಪ್ಪಣ್ಣ ಕುರಿ, ಅಶೋಕ ಕಣ್ಣೂರ ಮುಂತಾದವರು ಇದ್ದರು.