ಇಂದು ಗದಗ ನಗರಕ್ಕೆ ರಾಯಣ್ಣ ಅಮರಜ್ಯೋತಿ
ಗದಗ: ಆ. 25ರಂದು ಸಂಜೆ 5 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಮರಜ್ಯೋತಿ ಆಗಮಿಸಲಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಮರಜ್ಯೋತಿ ಜಾಥಾ ಸಮಿತಿ ಸಂಚಾಲಕ ಡಾ ಎಸ್.ಬಿ. ಗೋವಿಂದಪ್ಪನವರ ಹೇಳಿದರು.
ಶುಕ್ರವಾರ ನಗರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆ. 15ರಂದು ಬೆಳಗಾವಿ ಜಿಲ್ಲೆಯ ನಂದಗಡ ಗ್ರಾಮದ ಹುತಾತ್ಮ ಸ್ಥಳದಿಂದ ಅಮರಜ್ಯೋತಿ ಪ್ರಾರಂಭಗೊಂಡು ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆ ಸೇರಿದಂತೆ ಸುಮಾರು ಸಾವಿರ ಕಿ.ಮೀ ಸಂಚರಿಸಿ 24ರಂದು ರೋಣ ತಾಲೂಕಿನ ಮುಖಾಂತರ ಗದಗ ಜಿಲ್ಲೆಗೆ ಆಗಮಿಸಲಿದೆ.
ಸಂಚಾಲಕ ರವಿ ದಂಡಿನ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಹೆಸರು ಸಾರ್ಥಕಗೊಳಿಸಲು ಆತನ ಹೆಸರಿನಲ್ಲಿ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನಾಮಕರಣ, ಅಂಚೆಚೀಟಿ, ರಾಣಿ ಚನ್ನಮ್ಮ ವಿವಿಯಲ್ಲಿ ಸಂಶೋಧನ ಕೇಂದ್ರ, ಕೇಂದ್ರ ಸರ್ಕಾರದಿಂದ ಯುವ ವಿದ್ಯಾರ್ಥಿ ವೇತನ, ರಾಣಿಚನ್ನಮ್ಮನ ಹೆಸರಿನಲ್ಲಿ ಶೌರ್ಯ ಪ್ರಶಸ್ತಿ ನೀಡುವುದರ ಮೂಲಕ ದೇಶದ ಜನತೆ ಅವರ ದೇಶಪ್ರೇಮವನ್ನು ಸದಾ ಸ್ಮರಿಸುವಂತೆ ಮಾಡಬೇಕು ಎಂದರು.
ರುದ್ರಣ್ಣ ಗುಳಗುಳಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಮೆಣಸಗಿ ಮಾತನಾಡಿ, ರಾಯಣ್ಣನ ಜ್ಯೋತಿ ಆ. 25ರ ಸಂಜೆ ಬೆಟಗೇರಿಗೆ ಆಗಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸ್ವಾಗತಿಸಲಿದ್ದಾರೆ.
26ರಂದು ಮುಂಡರಗಿ, 27ರಂದು ಶಿರಹಟ್ಟಿ ಹುಲ್ಲೂರು ಗ್ರಾಮದ ಐತಿಹಾಸಿಕ ಅಮೋಘಸಿದ್ಧರ ಮಠದಲ್ಲಿ ಜ್ಯೋತಿ ಸ್ಥಾಪನೆಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಾಸಣ್ಣ ಕುರಡಗಿ, ಜಿಪಂ ಸದಸ್ಯ ಆರ್.ಡಿ. ಕೊಂಡಿಕೊಪ್ಪ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ, ಡಿ.ಎಲ್. ಗುರಿಕಾರ, ರವಿ ಜೋಗಿನ, ಮಂಜುನಾಥ ಹೆಸರೂ, ಸಂಜು ಸಿಂದಿಗೇರಿ, ತಿಪ್ಪಣ್ಣ ಹಾಜರಿದ್ದರು.