ಕಳ್ಳಬಟ್ಟಿ ಸಾರಾಯಿ ನಿಯಂತ್ರಣಕ್ಕೆ ಸಹಕರಿಸಿ: ರಾಗಿ
ಕನ್ನಡಪ್ರಭ ವಾರ್ತೆ, ರೋಣ, ಆ. 24
ಕಳ್ಳಬಟ್ಟಿ ಸಾರಾಯಿ ತಯಾರಿಕೆ ಕಾನೂನು ಬಾಹಿರ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ದುಷ್ಪರಿಣಾಮ ಮತ್ತು ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿದೆ. ಆದ್ದರಿಂದ ಅಕ್ರಮ ಚಟುವಟಿಕೆ, ಕಳ್ಳಬಟ್ಟಿ ಸಾರಾಯಿ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಬಕಾರಿ ಇಲಾಖೆಗೆ ಅಗತ್ಯವಾಗಿದೆ ಎಂದು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಗದಗ ಸಿಪಿಐ ಶಂಕರ ರಾಗಿ ಹೇಳಿದರು.
ಪಟ್ಟಣದ ನೀರಾವರಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ರೋಣ ತಾಲೂಕಿನ ನಾಗರಿಕ ಸಮಿತಿಯ ಪ್ರಥಮ ಸಭೆಯಲ್ಲಿ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈಗಾಗಲೇ ಅಬಕಾರಿ ಇಲಾಖೆಯು ಕಳ್ಳಬಟ್ಟಿ ತಯಾರಿಸುವ ತಾಂಡಾ ಮತ್ತು ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಕಳ್ಳಬಟ್ಟಿ ತಯಾರಿಸದಂತೆ ತಿಳುವಳಿಕೆ ಹೇಳಲಾಗಿದೆ. ಆದರೂ ಕೆಲವಡೆ ಇನ್ನು ತಯಾರಿಸಲಾಗುತ್ತಿದೆ. ಅಂತವುಗಳ ಬಗ್ಗೆ ಸಾರ್ವಜನಿಕರು ತಿಳಿವಳಿಕೆ ಹೇಳಬೇಕು.
ಈಗಾಗಲೇ ಇಲಾಖೆ ಕೆಲ ತಾಂಡಾಗಳ ಜನತೆಗೆ ಸ್ವಾವಲಂಬನೆಯ ಉದ್ಯೋಗ ಕಲ್ಪಿಸಲು ತರಬೇತಿ ನೀಡಿ, ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಿಲ್ಲೆಯ 73 ತಾಂಡಾಗಳಲ್ಲಿ 40 ಗುಡಿಸಲು ಮನೆ ನಿವಾಸಿಗಳಿಗೆ ಆಶ್ರಯ ಮನೆ ಕಲ್ಪಿಸಿದೆ. ಕುರಿ ಸಾಕಾಣಿಕೆಗೆ ಬೇಕಾದ ಸಾಲ, ಸೌಲಭ್ಯ, 120 ಟೇಲರಿಂಗ್ ಮಸಿನ್, ವಿಡಿಯೋ, ಮೊಬೈಲ್ ರಿಪೇರಿ, ಡ್ರೈವಿಂಗ್ ತರಬೇತಿ, ಕಂಪ್ಯೂಟರ್ ತರಬೇತಿ ನೀಡಲಾಗಿದೆ ಎಂದರು.
ಉದ್ಯೋಗ ಭರವಸೆ: ಜಿಲ್ಲೆಯಲ್ಲಿ ಪ್ರತಿಯೊಂದು ತಾಂಡಾಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು 1395 ಜನರ ಹೆಸರುಗಳನ್ನು ಪ್ರಕಟಿಸಲಾಗಿದ್ದು, ಇವರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಿ ಸ್ವಾವಲಂಬಿಗಳನ್ನಾಗಿಸುವ ದಿಸೆಯಲ್ಲಿ ಜಿಪಂಗೆ ರು. 5.85 ಕೋಟಿ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಪ್ರತಿಯೊಬ್ಬರಿಗೂ ಪರ್ಯಾಯ ಉದ್ಯೋಗ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಐ.ಬಿ. ಕೊಟ್ಟೂರುಶೆಟ್ಟರ ಮಾತನಾಡಿದರು. ಸಭೆಯಲ್ಲಿ ಡಾ.ಎಂ.ಬಿ.ಪೊಲೀಸ್ಪಾಟೀಲ, ಪುರಸಭೆ ಸದಸ್ಯ ತೋಟಪ್ಪ ನವಲಗುಂದ, ಮುತ್ತಣ್ಣ ಸಂಗಳದ, ಬಸವರಾಜ ಪಟ್ಟಣಶೆಟ್ಟಿ, ನ್ಯಾಯವಾದಿ ಎಸ್.ಕೆ. ಅರಗಿತ್ತಿ, ಪ್ರಶಾಂತ ರಾಠೋಡ ಮುಂತಾದವರು ಉಪಸ್ಥಿತರಿದ್ದರು.