ತಪ್ಪದ ಗ್ರಾಪಂ ನೌಕರರ ಗೋಳು
ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 24
ತಾಲೂಕಿನ 15 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂದಾಜು 100ಕ್ಕೂ ಹೆಚ್ಚು ನೌಕರರು ಹತ್ತಾರು ತಿಂಗಳುಗಳಿಂದ ವೇತನವಿಲ್ಲದೆ ದುಡಿಯುವಂತಾಗಿದೆ.
ಹೌದು, ಅನುದಾನ ಕೊರತೆ ಹಾಗೂ ಸ್ಥಳೀಯ ಗ್ರಾಪಂ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ವೇತನವಿಲ್ಲದೆ ಗೋಳಾಡುತ್ತಿದ್ದಾರೆ. ತಾಲೂಕಿನ ಪ್ರತಿ ಗ್ರಾಮಗಳಲ್ಲಿಯೂ ನಾಗರಿಕರಿಗೆ ಅವಶ್ಯ ಇರುವ ಕುಡಿವ ನೀರು, ಬೀದಿದೀಪ, ಕಸ ವಿಲೇವಾರಿ, ಕಚೇರಿ ಕೆಲಸ, ಗಣಕಯಂತ್ರ ಹೀಗೆ ಪಂಚಾಯ್ತಿ ಮಟ್ಟದ ಎಲ್ಲ ಕೆಲಸಗಳನ್ನು ನಿರ್ವಹಿಸುವ ನೌಕರರಿಗೆ ಮಾತ್ರ ಇಂದಿಗೂ ವೇತನವಿಲ್ಲ.
ಎಲ್ಲೆಲ್ಲಿ ವೇತನವಿಲ್ಲ..?: ತಾಲೂಕಿನ ಬಾಗೇವಾಡಿ ಪಂಚಾಯ್ತಿ ನೌಕರರ 10 ತಿಂಗಳು, ಬಿದರಹಳ್ಳಿ 3, ಕೊರ್ಲಹಳ್ಳಿ 4, ಹೆಸರೂರು 4, ಕಲಕೇರಿ 9, ಹಾರೋಗೇರಿ 6, ಹಿರೇವಡ್ಡಟ್ಟಿ 2, ಡಂಬಳ 3, ಕದಾಂಪೂರ 8, ಮೇವುಂಡಿ 2, ಹಳ್ಳಿಕೇರಿ 2, ಡೋಣಿ 4, ಶಿಂಗಟಾಲೂರ 3, ಪೇಠಾಲೂರ 2 ತಿಂಗಳು ವೇತನವಿಲ್ಲದೇ ಕೆಲಸ ಮಾಡುತ್ತಿದ್ದಾರೆ.
ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಸಂಬಳ ಬಂದರೇ ಬದುಕು ಸಾಗಿಸುವುದು ದುಸ್ತರ, ಅಂತಹುದರಲ್ಲಿ ಸಂಬಳವೇ ಇಲ್ಲ ಎಂದರೆ ಆಗುವ ತೊಂದರೆ ಇನ್ನೆಷ್ಟು ಎನ್ನುವ ಬಗ್ಗೆ ಹಿರಿಯ ಅಧಿಕಾರಿಗಳು, ಆಡಳಿತ ಮಂಡಳಿಗಳು ಚಿಂತಿಸದೇ ಇರುವುದು ದೌರ್ಭಾಗ್ಯವೇ ಸರಿ.
ನಿಗದಿಸಿದ ವೇತನಕ್ಕೂ ಕತ್ತರಿ..!: ಸರ್ಕಾರ ಇದೀಗ ಗ್ರಾಪಂ ನೌಕರರಾದ ವಾಟರ್‌ಮನ್‌ಗಳಿಗೆ ಪ್ರತಿ ತಿಂಗಳು ರು. 6055 ನಿಗದಿಪಡಿಸಿದ್ದು, ಇದೀಗ ಇವರಿಗೆ ಕೇವಲ 4800 ಮಾತ್ರ ನೀಡಲಾಗುತ್ತಿದೆ. ಸಿಪಾಯಿ ಹಾಗೂ ಸ್ವೀಪರ್‌ಗಳಿಗೆ ರು. 5955 ಇದ್ದು, ನೀಡುವುದು ಮಾತ್ರ ರು. 3600. ಅದೇ ರೀತಿ ಬಿಲ್ ಕಲೆಕ್ಟರ್‌ಗೆ ರು. 6227 ಬದಲಿಗೆ 4900 ಮಾತ್ರ ನೀಡಲಾಗುತ್ತಿದ್ದು, ನಮಗೂ ಪರಿಷ್ಕೃತ ವೇತನ ನೀಡಬೇಕು. ಎಲ್ಲ ನೌಕರರಿಗೂ ತುಟ್ಟಿ ಭತ್ಯೆ ಕೊಡಬೇಕಾಗುತ್ತದೆ. ಅದರ ಸೌಲಭ್ಯವೂ ಇಲ್ಲ. ವಾಟರ್‌ಮನ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುವವರು ರವಿವಾರ ರಜೆ ದಿನದ ವೇಳೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಎರಡು ಪಟ್ಟು ಆ ದಿನ ವೇತನ ಕೊಡುವಂತೆ ಸರ್ಕಾರದ ಆದೇಶವಿದೆ. ಆದರೆ, ಇಂದಿಗೂ ಅದು ಸಿಕ್ಕಿಲ್ಲ ಎನ್ನುವುದು ನೌಕರರ ಆರೋಪ.
ಜಾರಿಯಾಗದ ಭವಿಷ್ಯ ನಿಧಿ: ಗ್ರಾಪಂ ಸಿಬ್ಬಂದಿಗೆ ಭವಿಷ್ಯ ನಿಧಿಯನ್ನು ಸರ್ಕಾರಿ ಆದೇಶ 2008ರ ಪ್ರಕಾರ ಆದೇಶವಾದರೂ ಇಲ್ಲಿಯವರೆಗೂ ಜಾರಿಗೊಳಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಅನುಕೂಲ ಮಾಡಿಕೊಡುವುದು ಅವಶ್ಯ. ನಿಯಮಿತವಾಗಿ ಪ್ರತಿ ತಿಂಗಳು ಪಂಚಾಯ್ತಿ ನೌಕರರ ವೇತನ ಸಿಗದ ಕಾರಣ ಇಂದಲ್ಲ, ನಾಳೆ ವೇತನ ಬರುತ್ತದೆ ಎಂಬ ಆಶೆಯಿಂದ ಅಲ್ಲಲ್ಲಿ ಸಾಲ ಮಾಡಿ ತಮ್ಮ ಜೀವನ, ಇತರೆ ವ್ಯವಹಾರ ನಡೆಸುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ತೊಂದರೆ ಪಡುತ್ತಿರುವುದಾಗಿ ಹೆಸರೂರ ಗ್ರಾಪಂ ನೌಕರ ದ್ಯಾಮಣ್ಣ ಚೂರಿ ಅಳಲು ತೋಡಿಕೊಂಡರು.