ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಪಾಯದ ಗುಟುರು ಹಾಕುತ್ತಿರುವ ಗಟಾರ!

Mainashree
Updated On : 26 Aug 2013, 10:47 am

ಕನ್ನಡಪ್ರಭ ವಾರ್ತೆ, ರೋಣ, ಆ. 25
ಪುರಸಭೆ ಸಿಬ್ಬಂದಿಗೆ ನಗರದ ಯಾವ ಸಮಸ್ಯೆಗಳೂ ಕಾಣಸಿಗುವುದಿಲ್ಲ. ಸಿಕ್ಕರೂ ಅಂತಹ ಸಮಸ್ಯೆಗಳಿಗೆ ಬೇಗ ಮುಕ್ತಿ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಅದು ಅರೆಬರೆ ಕೆಲಸವಾಗಿರುತ್ತದೆ ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನವಿದೆ.
ಹೌದು, ಪಟ್ಟಣದ ಮಧ್ಯ ಭಾಗದ ಹುಬ್ಬಳ್ಳಿ, ಹೈದ್ರಾಬಾದ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಗಟಾರದ ಮೇಲ್ಹೊದಿಕೆ (ಚಪ್ಪಡಿಕಲ್ಲು)ಯನ್ನು ಸ್ವಚ್ಚತೆಗಾಗಿ ಕಳೆದ 3 ತಿಂಗಳ ಹಿಂದೆ ತೆಗೆದಿದ್ದು, ಇವರೆಗೂ ಅದನ್ನು ಮುಚ್ಚುವ ಗೋಜಿಗೆ ಹೋಗಿಲ್ಲ ನಮ್ಮ ಪುರಸಭೆ ಸಿಬ್ಬಂದಿ.
ಇದರಿಂದಾಗಿ ಇಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ದಿನನಿತ್ಯ ತೀವ್ರ ಕಿರಿಕಿರಿ ಅನುಭವಿಸುವ ಜತೆಗೆ ಕೈಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟುವಂತಾಗಿದೆ.
ಕಂಡುಕಾಣದಂತಿರುವ ಪುರಸಭೆ: ಕಳೆದ 3 ತಿಂಗಳ ಹಿಂದೆ ಗಟಾರು ತುಂಬಿ ಗಲೀಜು ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಆಗ ಪುರಸಭೆ ಸಿಬ್ಬಂದಿ ಗಟಾರು ಸ್ವಚ್ಛ ಮಾಡುವುದಕ್ಕಾಗಿ ಮೇಲ್ಹೊದಿಕೆ (ಚಪ್ಪಡಿ ಕಲ್ಲು) ತೆಗೆದಿದ್ದರು. ಆದರೆ, ಈವರೆಗೂ ಮರಳಿ ಗಟಾರ ಮುಚ್ಚದೇ ಬಿಟ್ಟಿದ್ದಾರೆ. ಇದರಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ನಿತ್ಯ ನೂರಾರು ವಾಹನಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಗ್ರಾಹಕರು ಮತ್ತು ವ್ಯಾಪಾರಸ್ಥರು ದುರಸ್ತಿಗೆ ಗಮನ ಹರಿಸದ ಪುರಸಭೆಯ ಆಡಳಿತ ವೈಖರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.  
ರೋಗದ ಭೀತಿಯಲ್ಲಿ ವ್ಯಾಪಾರಸ್ಥರು: ಗಟಾರ ಕಸ, ಕಡ್ಡಿ, ಪ್ಲಾಸ್ಟಿಕ್‌ನಿಂದ ತುಂಬಿದ್ದು, ನೀರು ಸರಾಗವಾಗಿ ಹರಿಯದೇ ಒಂದೆಡೆ ನಿಲ್ಲುತ್ತದೆ. ಇದರಿಂದ ಕೆಟ್ಟ ವಾಸನೆ ಬರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಇಲ್ಲಿನ ಜನತೆಯನ್ನು ಕಾಡುತ್ತಿದೆ. ಅಲ್ಲದೆ, ಈಗಾಗಲೇ ಅನೇಕರು ಗಟಾರದಲ್ಲಿ ಬಿದ್ದಿದ್ದು, ದುರಸ್ತಿಗೊಳ್ಳದ ಗಟಾರದಿಂದಾಗಿ ವ್ಯಾಪಾರ ಕುಂಠಿತವಾಗಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ಥರಾದ ಗಂಗಾಧರ ಹಡಪದ, ಅನೀಲ ನೀಲುಗಲ್, ಮಲ್ಲಪ್ಪ ಕಡಗದ.
ಗಟಾರ ಸಮತಟ್ಟಾಗಿಲ್ಲ: ಈಚೆಗೆ ನಿರ್ಮಿಸಲಾದ ಹೊಸ ಗಟಾರಗಳು ಮೊದಲಿದ್ದ ಗಟಾರಿಗಿಂತ ತಳಮಟ್ಟದ್ದರಾಗಿದ್ದರಿಂದ ಇಂತಹ ಸಮಸ್ಯೆ ಎದುರಾಗುತ್ತಿವೆ. ಪಟ್ಟಣದ ಶಿವಪೇಟೆ, ಶಿವಾನಂದ ನಗರ, ಕುರಬಗಲ್ಲಿ, ತಳವಾರ ಓಣಿ, ಹಳೆ ಸಂತೆ ಬಜಾರ ಸೇರಿದಂತೆ ಅನೇಕ ಕಡೆಗಳಿಂದ ಹರಿದು ಬರುವ ನೀರು ಎತ್ತರಕ್ಕಿರುವ ಈ ಗಟಾರದ ಮೂಲಕ ಹಾಯ್ದು ಹೋಗದೇ ರಸ್ತೆಯ ಮೇಲೆ ಹರಿಯುತ್ತದೆ. ಮಳೆಯಾಯಿತೆಂದರೆ ಗಟಾರದ ನೀರು ಇಲ್ಲಿನ ಅಂಗಡಿ, ಮನೆಗಳಿಗೆ ನುಗ್ಗುತ್ತವೆ. ಅವೈಜ್ಞಾನಿಕವಾಗಿ ನಿರ್ಮಿಸಲಾದ ಗಟಾರನ್ನು ಸರಿಪಡಿಸುವಲ್ಲಿ ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.

 ಪಿ.ಎಸ್. ಪಾಟೀಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement