ಉ.ಪ್ರ. ಸರ್ಕಾರದಿಂದ ಹಿಂದೂ ವಿರೋಧಿ ನೀತಿ
ಕನ್ನಡಪ್ರಭ ವಾರ್ತೆ, ಗದಗ, ಆ. 25
ಶಾಂತಿಯುತ ಮೆರವಣಿಗೆಯಲ್ಲಿ ತೊಡಗಿದ್ದ ಹಿಂದೂಪರ ನಾಯಕರು ಹಾಗೂ ನೂರಾರು ಸಾಧು, ಸಂತರನ್ನು ಬಂಧಿಸಿದ ಉತ್ತರ ಪ್ರದೇಶ ಸರ್ಕಾರದ ಕ್ರಮ ಸಂವಿಧಾನದ ಹಕ್ಕುಗಳ ಹತ್ತಿಕ್ಕುವ ಪ್ರಯತ್ನವಾಗಿದ್ದು, ಹಿಂದೂ ವಿರೋಧಿ ನೀತಿಯಾಗಿದೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಆರೋಪಿಸಿದರು.
ಭಾನುವಾರ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಗದಗ ಜಿಲ್ಲಾ ಶ್ರೀರಾಮಸೇನೆಯಿಂದ ಹಿಂದೂಪರ ನಾಯಕರ ಬಂಧನ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
ಭಾನುವಾರ ಬೆಳಗ್ಗೆ ಉತ್ತರ ಪ್ರದೇಶದ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಚೌರಿಸಿ ಕೋಸ್ ಪರಿಕ್ರಮದ ಅಂಗವಾಗಿ ಶಾಂತಿಯುತ ಮೆರವಣಿಗೆಯಲ್ಲಿ ತೊಡಗಿದ್ದ ವಿಶ್ವ ಹಿಂದೂ ಪರಿಷತ್‌ನ ಗಣ್ಯ ನಾಯಕರಾದ ಅಶೋಕ ಸಿಂಘಾಲ್ ಹಾಗೂ ಡಾ ಪ್ರವೀಣಬಾಯಿ ತೊಗಾಡಿಯಾ ಸೇರಿದಂತೆ ನೂರಾರು ಸಾಧು, ಸಂತರನ್ನು ಬಂಧಿಸಿರುವ ಸಮಾಜವಾದಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಮುಸ್ಲಿಮ್ ತುಷ್ಟೀಕರಣಕ್ಕೆ ಪ್ರಾಮುಖ್ಯತೆ ನೀಡಿ ಹಿಂದೂ ವಿರೋಧಿ ಕೃತ್ಯಕ್ಕೆ ಆದ್ಯತೆ ನೀಡಿದೆ. ದೇಶದಲ್ಲಿ ಶಾಂತಿಯುತ ಮೆರವಣಿಗೆಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಸಂವಿಧಾನ ವಿರೋಧಿ ಕೃತ್ಯವಾಗಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರ ಈ ತಪ್ಪು ನಿರ್ಧಾರ ಅಕ್ಷಮ್ಯ ಅಪರಾಧವಾಗಿದ್ದು, ಹಿಂದೂಗಳು ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಈ ಸಂದರ್ಭ ಶ್ರೀರಾಮಸೇನೆ ಸಂಘಟನೆಯ ಉತ್ತರ ಪ್ರಾಂತದ ಅಧ್ಯಕ್ಷ ಡಾ ಈಶ್ವರಗೌಡ ಪಾಟೀಲ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ರಾಜು ಖಾನಪ್ಪನವರ, ಮಾರುತಿ ದಹಿಂಡೆ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನಾ ಮೆರವಣಿಗೆಯು ನಗರದ ವೀರನಾರಾಯಣ ರಸ್ತೆಯಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹುಯಿಲಗೋಳ ನಾರಾಯಣ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು.
ಈ ಸಂದರ್ಭ ಯುಪಿಎ ಸರ್ಕಾರದ ಹಿಂದೂ ವಿರೋಧಿ ಕೃತ್ಯ ಹಾಗೂ ಸಾಧು, ಸಂತರ ಬಂಧನ ಖಂಡಿಸಿ ಘೋಷಣೆ ಕೂಗಲಾಯಿತು.