ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೆಸರು ಬೆಲೆ ದಿಢೀರ್ ಕುಸಿತ

Mainashree
Updated On : 26 Aug 2013, 10:45 am

ಕನ್ನಡಪ್ರಭ ವಾರ್ತೆ, ಗದಗ, ಆ. 25
ರೈತನ ಶೋಷಣೆ ಇಂದಿಗೂ ನಿಂತಿಲ್ಲ ಎಂಬುದಕ್ಕೆ ಇಂದಿನ ಹೆಸರು ಬೆಳೆಯಲ್ಲಾದ ದಿಢೀರ್ ಕುಸಿತವೇ ಸಾಕ್ಷಿ. 15 ದಿನಗಳ ಹಿಂದೆ ಹೆಸರು ಬೆಳೆಗೆ ಎಲ್ಲಿಲ್ಲದ ಬೇಡಿಕೆ. ಆಗ ಪ್ರತಿ ಕ್ವಿಂಟಲ್‌ಗೆ ರು. 6 ಸಾವಿರಕ್ಕೂ ಅಧಿಕವಾಗಿದ್ದ ಬೆಲೆ ಇಂದು ಕೇವಲ ರು. 3 ಸಾವಿರದಿಂದ ರು. 4 ಸಾವಿರಕ್ಕೆ ದಿಢೀರನೆ ಕುಸಿದಿದ್ದು, ರೈತರು ಬೆಳೆದ ಹೆಸರು ಬೆಳೆಗೆ ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ.
ಗದಗ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಇಲ್ಲಿ ಶೇ. 70ಕ್ಕೂ ಅಧಿಕ ರೈತರಿದ್ದಾರೆ. ಇವರಿಗೆ ಭೂಮಿಯೇ ಆಧಾರ. ಬಿತ್ತನೆ ಮಾಡಿದ ಸಂದರ್ಭ ಸಮರ್ಪಕ ಮಳೆಯಾದಲ್ಲಿ ರೈತರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ರೈತರು ಹೊಸ ಹೊಸ ಕನಸುಗಳನ್ನು ಕಟ್ಟಿಕೊಂಡು ಸಾಲ, ಸೋಲ ಮಾಡಿ ಬಿತ್ತನೆಗೆ ಬೀಜ, ಗೊಬ್ಬರ ಖರೀದಿ ಮಾಡಿ ತಮ್ಮ ಜಮೀನುಗಳಲ್ಲಿ ಬಿತ್ತನೆ ಕೈಗೊಂಡಿರುತ್ತಾರೆ. ಈ ವೇಳೆ ರೈತರು ಬಿತ್ತಿದ ಸಂದರ್ಭದಲ್ಲಿ ಸಮರ್ಪಕ ಮಳೆಯಾದಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಯು ಉತ್ತಮ ಫಸಲು ನೀಡಲು ಸಾಧ್ಯ. ಆದರೆ, ಅಗತ್ಯಕ್ಕೆ ತಕ್ಕಂತೆ ಮಳೆಯಾಗದಿದ್ದಲ್ಲಿ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗುತ್ತದೆ. ಹಾಗೆಯೇ ಜಿಲ್ಲೆಯಲ್ಲಿನ ಮಳೆ ಪ್ರಮಾಣ ಅವಲೋಕಿಸಿದಲ್ಲಿ ಗದಗ ಜಿಲ್ಲೆಯ ರೈತರ ಪರಿಸ್ಥಿತಿ ಹೀಗೆಯೇ ಇದೆ ಎಂದು ಹೇಳಬಹುದು.
ಜಿಲ್ಲೆಯಲ್ಲಿ ಬರದ ಛಾಯೆ: 2-3 ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲದ ಛಾಯೆ ಎದುರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಹಿಂದೆಯೂ ಬರದ ಛಾಯೆಯಲ್ಲಿಯೂ ಅಲ್ಪ ಪ್ರಮಾಣದಲ್ಲಿ ಬಂದ ಬೆಳೆಗೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದ ಉದಾಹರಣೆಗಳು ಸಾಕಷ್ಟಿವೆ. ಕಳೆದ 2-3 ತಿಂಗಳಿಂದ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೇ ಇರುವುದರಿಂದ ರೈತರು ಬೆಳೆದ ಹೆಸರು ಚಿಗುರೊಡೆಯುತ್ತಿದ್ದಂತೆಯೇ ಬಿಸಿಲ ಧಗೆಗೆ ಕಮರಿ ಹೋಗಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಉಳಿದ ಹೆಸರು ಬೆಳೆಯನ್ನೇ ನಂಬಿಕೊಂಡು ರೈತರು ಹೆಸರು ಬೆಳೆಗೆ ಬೇಕಾದ ಅಗತ್ಯ ಗೊಬ್ಬರ ನೀಡಿ ಅಲ್ಪ ಪ್ರಮಾಣದಲ್ಲಿ ಬೆಳೆ ಬೆಳೆದಿದ್ದಾರೆ. ಆದರೆ, ಈಗ ಹೆಸರು ಬೆಳೆಯ ಬೆಲೆ ಸಂಪೂರ್ಣ ಕುಸಿದಿದ್ದು, ಕುಸಿದ ಬೆಲೆ ಕೇಳಿದ ರೈತರು ಮೂರ್ಛೆ ಹೋಗುವ ಪರಿಸ್ಥಿತಿ ಇಂದು ಎದುರಾಗಿದೆ.
ದಿಢೀರನೆ ಕುಸಿದ ಬೆಲೆ: 10-15 ದಿನಗಳ ಹಿಂದಿನ ಹೆಸರು ಬೆಲೆಗೂ ಇಂದಿನ ಬೆಲೆಗೂ ಅಗಾಧ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇದರಿಂದ ರೈತರ ಮನದಲ್ಲಿ ದುಗುಡ ಕಾಣುತ್ತಿದೆ. ಮೊದಲು ರು. 6 ಸಾವಿರದಿಂದ ರು. 6,800ಗಳಿಗೆ ಮಾರಿದ ಹೆಸರು ಇಂದು ಕೇವಲ ರು. 3ರಿಂದ ರು. 4 ಸಾವಿರಕ್ಕೆ ಮಾರಾಟವಾಗುತ್ತಿದೆ. ಸಾವಿರಾರು ರುಪಾಯಿ ವೆಚ್ಚ ಮಾಡಿ ಬೆಳೆ ತೆಗೆದ ರೈತನಿಗೆ ಹೆಸರು ಬೆಳೆ ಬೆಳೆಯಲು ರೈತ ಮಾಡಿದ ಖರ್ಚು ಸಹ ಮಾರಾಟದಿಂದ ಬರದಿರುವುದರಿಂದ ರೈತರು ಹೆಸರು ಬೆಳೆಯನ್ನು ಮಾರಾಟ ಮಾಡಲು ಹಿಂಜರಿಯುತ್ತಿದ್ದಾರೆ.


ಅಜೀಜಅಹ್ಮದ ಬಳಗಾನೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement