ಅಜ್ಜಿ ಬದುಕು ದುಸ್ತರ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 26
ತಂದೆ-ತಾಯಿ ನಾನು ಚಿಕ್ಕವಳಿರುವಾಗಲೇ ನನ್ನನ್ನು ದೇವದಾಸಿ ಎಂದು ಬಿಂಬಿಸಿದರು. ಸಮಾಜ ನನ್ನನ್ನು ನೋಡುವ ರೀತಿಯೇ ಬೇರೆಯಾಯಿತು. ಸಹೋದರ ನನ್ನಿಂದ ದೂರವಾದ. ಸಹೋದರನ ಮಕ್ಕಳು ಇದ್ದಾರೆ. ಅವರಿಂದ ಒಂದು ಹೊತ್ತಿನ ಅನ್ನ ಸಿಗುತ್ತಿಲ್ಲ. ಈಗ ನನಗೆ ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿ ಬಂದೊದಗಿದೆ ಎಂದು ಪಟ್ಟಣದಲ್ಲಿ ಭಿಕ್ಷೆ ಬೇಡಿ ತಿಂದು ದಿನ ದೂಡುತ್ತಿರುವ ವೃದ್ಧೆಯೋರ್ವಳು ತನ್ನ ನೋವು ತೋಡಿಕೊಂಡಳು.
ಯಾರ ಆಸರೆಯೂ ಅವಳಿಗಿಲ್ಲವಾದ್ದರಿಂದ ಸದ್ಯ ಅವಳು ಅನಾಥೆಯಾಗಿದ್ದು, ಭಿಕ್ಷೆ ಬೇಡಿ ತಿನ್ನದೇ ಗತಿಯಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಪಡಬಾರದ ಕಷ್ಟ ಪಡುತ್ತಿದ್ದಾಳೆ. ಆಹಾರವಿಲ್ಲದೆ ತೊಂದರೆಯಲ್ಲಿರುವವರಿಗೆ, ಬಡವರಿಗೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರೂ ತುತ್ತು ಅನ್ನಕ್ಕೂ ಪರದಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ.
ಬದುಕಲು ಹೆಣಗಾಟ: ಹುಬ್ಬಳ್ಳಿಯ (70)ರ ಇಳಿ ವಯಸ್ಸಿನ ಈರಮ್ಮ ಕೊಲ್ಲಾರಿ ಎಂಬುವಳು ಪಟ್ಟಣದ ಮಾರುಕಟ್ಟೆಯಲ್ಲಿ ನಿತ್ಯ ಕಂಡ ಕಂಡವರ ಕಾಲಿಗೆರಗಿ ಬೇಡಿಕೊಂಡು ತಿನ್ನುತ್ತಾ ಸಂಕಷ್ಟದಲ್ಲಿದ್ದಾಳೆ. ಈ ವಯೋವೃದ್ಧಳು ಕಣ್ಣೀರಲ್ಲಿ ಕೈ ತೊಳೆಯುತ್ತಾ ಜೀವನ ಸಾಗಿಸುತ್ತಿದ್ದು ನೆರವಿಗಾಗಿ ಕೈ ಚಾಚುತ್ತಿದ್ದಾಳೆ.
ಸರ್ಕಾರದ ನೆರವಿಲ್ಲ: ವಿಧವಾ ವೇತನ, ವೃದ್ಧಾಪ್ಯ ವೇತನ ಬರತೈತಿ ಅಂತ ನಮ್ಮೂರ ಜನ ಹೇಳತಾರ. ಕೇಳಾಕ್ ಹೋದ್ರ ಆ ಪತ್ರ, ಈ ಪತ್ರ ಎಂದು ಕಾಗದ-ಪತ್ರಗಳನ್ನ ಕೇಳುವುದರಿಂದ ಏನು ಗೊತ್ತಿಲ್ಲದಿರುವ ನನಗೆ ಎಲ್ಲಿಂದ ಕಾಗದ ಪತ್ರ ಹೊಂದಿಸಿ ಕೊಡಲ್ರೀ ಎಂದು ವೇತನ ಬರದೇ ಇರುವುದಕ್ಕೆ ವ್ಯಥೆ ಪಡುತ್ತಾಳೆ. ಯಾರಿಗೆ ಅಂದ್ರೆ ಏನ್ ಆಗದ ಐತ್ರೀ...ಹಣೆ ಬರಹದಾಗ ಇದ್ದಿದ್ದ ನಡಿತೈತಿ ಎಂದು ಈರಮ್ಮ ಕೊಲ್ಲಾರಿ ಬೇಸರದಿಂದ ನೊಂದು ನುಡಿಯುತ್ತಾಳೆ.
ಭಿಕ್ಷುಕರ ಸಂಖ್ಯೆ ಹೆಚ್ಚಳ: ಪಟ್ಟಣದ ಬಸ್ ನಿಲ್ದಾಣ, ದೇವಸ್ಥಾನ, ಮಾರುಕಟ್ಟೆಗಳಲ್ಲಿ ವೃದ್ಧ ಭಿಕ್ಷುಕರು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಕೈಕಾಲು ಚೆನ್ನಾಗಿದ್ದರೂ, ದೇಹದಲ್ಲಿ ಶಕ್ತಿ ಇದ್ದರೂ ಇವರಿಗೆ ಸಂಬಂಧಿಕರ, ಮಕ್ಕಳ ಆಸರೆ ಇಲ್ಲ. ಇದರಿಂದ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚುತ್ತಿದೆ. ವೃದ್ಧ ಭಿಕ್ಷುಕರಲ್ಲಿ ಹೆಚ್ಚಿನವರು ಆಸ್ತಿ, ಮನೆ ಮಾಡಿ ದೊಡ್ಡ ಸಂಸಾರದ ಕನಸು ಕಂಡವರು. ಸ್ವಾಭಿಮಾನಿಗಳು, ಮತ್ತೊಬ್ಬರ ಬಳಿ ಹಣಕ್ಕಾಗಿ ಅಂಗಲಾಚಲು ಮನಸ್ಸಿಲ್ಲದವರಿದ್ದಾರೆ. ಆದರೆ, ಹೊಟ್ಟೆ ತುಂಬಿಕೊಳ್ಳಲು ಅನಿವಾರ್ಯವಾಗಿ ಭಿಕ್ಷೆಗಿಳಿಯುವ ಪರಿಸ್ಥಿತಿ ಎದುರಾಗಿದ್ದು ಇವರ ದುರದೃಷ್ಟ.
ವೃದ್ಧರ ಕಡೆಗಣನೆ: ಮಧ್ಯಮ, ಶ್ರೀಮಂತ ವರ್ಗಗಳು ವೃದ್ಧರನ್ನು ಕಡೆಗಣಿಸುತ್ತವೆ. ವೃದ್ಧಾಶ್ರಮವನ್ನು ಆಶ್ರಯಿಸುವಂತೆ ಮಾಡುತ್ತವೆ. ಸದೃಢವಾಗಿದ್ದ ಕಾಲದಲ್ಲಿ ದುಡಿದು ದಣಿದ ಜೀವಗಳು ಇಳಿಗಾಲದಲ್ಲಿ ನೆಮ್ಮದಿ ಬಯಸುತ್ತವೆ. ಆರೋಗ್ಯದ ನಿರ್ಲಕ್ಷ್ಯದಿಂದ ದೇಹ ಅನೇಕ ಕಾಯಿಲೆಗಳ ಗೂಡಾಗುತ್ತದೆ. ಕೆಲ ಕಾಯಿಲೆ ಬೇಗ ಗುಣವಾಗುವುದಿಲ್ಲ. ವೈದ್ಯಕೀಯ ವೆಚ್ಚ ಭರಿಸಲಾಗದೇ, ತಮ್ಮವರಿಂದಲೇ ತಿರಸ್ಕೃತಗೊಂಡ ವೃದ್ಧರು ಮನೆಯಿಂದ ಬೀದಿಗೆ ಬೀಳುತ್ತಾರೆ.
ಕೆಲವರಿಗೆ ವೃದ್ಧಾಶ್ರಮದ ಆಸರೆ ಸಿಗುತ್ತದೆ. ಇನ್ನು ಕೆಲವರಿಗೆ ಭಿಕ್ಷಾವೃತ್ತಿ ಆಶ್ರಯಿಸದೇ ವಿಧಿಯಿಲ್ಲ. ಭಿಕ್ಷಾಟನೆ ನಿರ್ಮೂಲನೆ ಎಂಬ ಕನಸು ಕಾಣುವ ಸರ್ಕಾರ, ಅವರಿಗೆ ಸರಿಯಾದ ರೀತಿಯಲ್ಲಿ ನೆರವಾಗಲು ತಲೆಕೆಡಿಸಿಕೊಳ್ಳುವುದಿಲ್ಲ. ಕಂದಾಯ ಇಲಾಖೆ, ಜಿಲ್ಲಾ ಮಹಿಳೆಯರ ದೇವದಾಸಿ ಪುನರ್ವಸತಿ ಕೇಂದ್ರದವರು ಕಾಳಜಿ ವಹಿಸಿ ನೆರವಿಗೆ ಧಾವಿಸಿದರೆ ಈರಮ್ಮ ಕೊಲ್ಲಾರಿ ವೃದ್ಧ ಮಹಿಳೆಯ ಬದುಕು ಸುಗಮವಾಗಿ ಸಾಗುವುದರಲ್ಲಿ ಸಂದೇಹವಿಲ್ಲ. ಪ್ರಜ್ಞಾವಂತರು ಇಂತವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯುವುದು ಅವಶ್ಯ.
-ಮಹದೇವಪ್ಪ ಎಂ. ಸ್ವಾಮಿ