ಇಂದು ರೋಣಕ್ಕೆ ವಿವೇಕಾನಂದರ ರಥಯಾತ್ರೆ
ರೋಣ: ರಾಮಕೃಷ್ಣಮಠ ಮತ್ತು ರಾಮಕೃಷ್ಣ ಮಿಶನ್ ಬೆಂಗಳೂರ ಇವರ ವತಿಯಿಂದ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ನಿಮಿತ್ತ ಹಮ್ಮಿಕೊಂಡ ವಿವೇಕಾನಂದರ ರಥಯಾತ್ರೆಯು ಆ. 27ರಂದು ಮಧ್ಯಾಹ್ನ 3 ಗಂಟೆಗೆ ರೋಣ ಪಟ್ಟಣಕ್ಕೆ ಆಗಮಿಸಲಿದೆ ಎಂದು ಹಾವೇರಿ ಲೋಕಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು. ಅವರು ಪಟ್ಟಣದ ಶಾಸಕ ಜಿ.ಎಸ್. ಪಾಟೀಲರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಜಿ.ಎಸ್.ಪಾಟೀಲ ನೇತೃತ್ವದಲ್ಲಿ ನರಗುಂದದಿಂದ ರೋಣ ಪಟ್ಟಣಕ್ಕೆ ಆಗಮಿಸುವ ರಥಯಾತ್ರೆಯನ್ನು ಪಟ್ಟಣದ ಪೋತರಾಜನ ಕಟ್ಟೆಯ ಬಳಿ ಸ್ವಾಗತಿಸಲಾಗುವುದು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ, ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿವಿಧ ಗಣ್ಯರಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ರಥ ಯಾತ್ರೆಯ ಮೆರವಣಿಗೆಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಬೀಜ ನಿಗಮದ ನಿರ್ದೇಶಕ ಐ.ಎಸ್. ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
30ರಂದು ಪ್ರತಿಷ್ಠಾಪನೆ
ಗಜೇಂದ್ರಗಡ: ಸ್ಥಳೀಯ ಗಂಜಿಪೇಟೆ ನೇಕಾರ ಕಾಲೋನಿಯ ಹುತ್ತದ ನಾಗಲಿಂಗೇಶ್ವರ ದೇಗುಲದಲ್ಲಿ ನಾಗಲಿಂಗೇಶ್ವರ, ವಿಘ್ನೇಶ್ವರ ಜತೆಗೆ ಆಂಜನೇಯ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮವು ಆ. 30 ರಂದು ನಡೆಯಲಿದೆ. ದಕ್ಷಿಣ ಕಾಶೀ ಪ್ರಸಿದ್ಧಿಯ ಕಾಲಕಾಲೇಶ್ವರ ಸುಕ್ಷೇತ್ರ ಅರ್ಚಕ ಕಲ್ಲಿನಾಥ ಭಟ್ಟರ ಸಾನ್ನಿಧ್ಯದಲ್ಲಿ ಆ. 29 ರಂದು ಮಧ್ಯಾಹ್ನ 3.30 ಗಂಟೆಗೆ ನಡೆಯುವ ಮೂರ್ತಿಗಳ ಮಹಾ ಮೆರವಣಿಗೆಯಲ್ಲಿ ಸುಮಂಗಲಿಯರು ಕಳಶ, ಭಜನಾ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇಗುಲ ತಲುಪಲಿದೆ. ಆ. 30 ರಂದು ಹೋಮ ಹವನಗಳೊಂದಿಗೆ ಮಧ್ಯಾಹ್ನ 12.15 ಗಂಟೆಗೆ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಡೆಯುವುದು. ನಂತರ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಹುತ್ತದ ನಾಗಲಿಂಗೇಶ್ವರ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮ ಮರಳು ಸಾಗಾಟ: 17 ಲಾರಿಗಳ ವಶ
ಲಕ್ಷ್ಮೇಶ್ವರ: ಪಟ್ಟಣದ ಮುಖಾಂತರ ಹುಬ್ಬಳ್ಳಿ ಹಾಗೂ ಮತ್ತಿತರ ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 17 ಲಾರಿಗಳನ್ನು ಭಾನುವಾರ ಮತ್ತು ಸೋಮವಾರ ದಾಳಿ ಮಾಡಿದ ಪ್ರೊಬೇಶನರಿ ಡಿವೈಎಸ್ಪಿ ಬಿ.ಎಸ್. ನೇಮಗೌಡರ ವಶಪಡಿಸಿಕೊಂಡಿದ್ದಾರೆ. 20 ದಿನಗಳಿಂದ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೊಬೇಶನರಿ ಡಿವೈಎಸ್ಪಿ ಬಿ.ಎಸ್. ನೇಮಗೌಡರ ಸುಮಾರು 100ಕ್ಕೂ ಹೆಚ್ಚು ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.