ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿಎಚ್‌ಪಿ ನಾಯಕರ ಬಂಧನ: ಪ್ರತಿಭಟನೆ

Lingaraj Badiger
Updated On : 27 Aug 2013, 11:44 am

ಕನ್ನಡಪ್ರಭ ವಾರ್ತೆ, ಗದಗ, ಆ. 26
ಉತ್ತರ ಪ್ರದೇಶದ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ವಿಶ್ವ ಹಿಂದೂಪರಿಷತ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಚೌರಾಸಿ ಕೋಸಿ ಪರಿಕ್ರಮದ ಶಾಂತಿಯುತ ಯಾತ್ರೆ ನಡೆಸುತ್ತಿದ್ದ ಅಶೋಕ ಸಿಂಘಾಲ್ ಹಾಗೂ ಪ್ರವೀಣ ತೊಗಾಡಿಯಾ ನೇತೃತ್ವದ ಸಾವಿರಾರು ಸಾಧು-ಸಂತರನ್ನು ಬಂಧಿಸಿರುವ ಕ್ರಮ ವಿರೋಧಿಸಿ ಸೋಮವಾರ ವಿಶ್ವ ಹಿಂದೂಪರಿಷತ್, ಬಜರಂಗದಳ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ ಯಾದವ್ ಭಾವಚಿತ್ರ ದಹಿಸಿ ಪ್ರತಿಭಟನೆ ನಡೆಸಿದರು.
ಅಯೋಧ್ಯೆಯಲ್ಲಿ ಶಾಂತಿಯುತ ಯಾತ್ರೆ ನಡೆಸುತ್ತಿದ್ದ ಸಾವಿರಾರು ಸಾಧು, ಸಂತರನ್ನು ಹಾಗೂ ವಿಎಚ್‌ಪಿ ನಾಯಕ ಪ್ರವೀಣ ತೊಗಾಡಿಯಾ, ಅಶೋಕ ಸಿಂಘಾಲ್ ಅವರನ್ನು ಬಂಧಿಸಲಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿಎಚ್‌ಪಿ ನಾಯಕರನ್ನು ಹಾಗೂ ಹಿಂದೂ ಸಾಧು-ಸಂತರನ್ನು ಬಂಧಿಸಿರುವುದು ಖಂಡನಾರ್ಹ. ಭಾರತವು ಹಿಂದೂ ಪ್ರಧಾನ ದೇಶವಾಗಿದ್ದು, ಇಲ್ಲಿ ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ. ನಮ್ಮ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ತನ್ನ ಧಾರ್ಮಿಕ ಆಚರಣೆಗಳನ್ನು ಆಚರಿಸುವ ಅವಕಾಶ ನೀಡಿದೆ. ಹಾಗೂ ನಮ್ಮ ಪರಂಪರೆಗೆ ಸಂಬಂಧಿಸಿದ ಸಮಸ್ಯೆಗಳ ವಿಷಯದಲ್ಲಿ ವಿಭಿನ್ನ ಕಾರ್ಯಕ್ರಮಗಳು ಮತ್ತು ಆಂದೋಲನಗಳ ಮೂಲಕ ನಮ್ಮ ವಿಚಾರಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಅಧಿಕಾರವನ್ನೂ ನೀಡಿದೆ. 1528ರಲ್ಲಿ ಅಕ್ರಮಣಕಾರಿ ಬಾಬರನ ಮೂಲಕ ಶ್ರೀರಾಮಜನ್ಮಭೂಮಿಯ ಮಂದಿರವನ್ನು ಒಡೆದು ಒಂದು ಕಟ್ಟಡ ನಿರ್ಮಿಸಲಾಗಿತ್ತು ಎಂಬುದು ಎಲ್ಲರಿಗೂ ತಿಳಿದ ವಿಷಯ. ಅಲ್ಲಿಂದ ಇಲ್ಲಿಯವರೆಗೆ ಮಂದಿರದ ನಿರ್ಮಾಣಕ್ಕಾಗಿ 76 ಬಾರಿ ಸಂಘರ್ಷಗಳು ನಡೆದು ಲಕ್ಷಾಂತರ ಜನರು ಬಲಿದಾನಗೈದಿದ್ದಾರೆ.
11,12 ಜೂನ್ 2013 ರಂದು ಹರಿದ್ವಾರದಲ್ಲಿ ಧರ್ಮಾಚಾರ ಕೇಂದ್ರೀಯ ಮಾರ್ಗದರ್ಶಕ ಮಂಡಳಿಯ ಸಭೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್‌ನಲ್ಲಿ ಶಾಸನ ಜಾರಿಯಾಗಬೇಕೆಂಬ ಬೇಡಿಕೆಯು ಶೀಘ್ರವಾಗಿ ಸಫಲಗೊಳ್ಳಲು ಅಯೋಧ್ಯೆಯ ನಾಲ್ಕೂ ದಿಕ್ಕುಗಳಲ್ಲಿ ಪರಿಕ್ರಮವನ್ನು ದೇಶವ್ಯಾಪಿಯಾಗಿರುವ ಸಂತರಿಂದ ನಡೆಸಲಾಗುವುದೆಂದು ನಿಶ್ಚಯಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಂತರು ಉತ್ತರ ಪ್ರದೇಶದ ಮುಲಾಯಂಸಿಂಗ್ ಯಾದವ ಹಾಗೂ ಸಿಎಂ ಅಖಿಲೇಶ ಯಾದವರನ್ನು ಭೇಟಿ ಮಾಡಿ ಈ ಧಾರ್ಮಿಕ ಕಾರ್ಯ ಅನುಷ್ಠಾನ ಸಹಜ ರೀತಿಯಲ್ಲಿ ಸಫಲವಾಗಲು ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿಸಲಾಗಿತ್ತು. ಆದರೆ ಆಗಸ್ಟ್ 18 ರಂದು ಉತ್ತರ ಪ್ರದೇಶದ ಗೃಹಮಂತ್ರಿಗಳು ಹಾಗೂ ಪೂಲೀಸ್ ಮಹಾನಿರ್ದೇಶಕರು ಪರಿಕ್ರಮ ಅನುಮತಿ ನಿರಾಕರಿಸಿ, ಪರಿಕ್ರಮವನ್ನು ನಿಷೇಧ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಈ ಕ್ರಮ ಹಿಂದೂ ಸಮಾಜದ ಮೂಲಭೂತ ಅಧಿಕಾರದ ಹರಣವಾಗಿದೆ. ಧಾರ್ಮಿಕ ಕ್ಷೇತ್ರದ ಪ್ರದಕ್ಷಣೆ ಮಾಡುವುದು ದೇಶದ ಯಾವುದೇ ಭೌಗೋಳಿಕ ಪ್ರದೇಶದಲ್ಲಿ ಯಾವಾಗ ಬೇಕಾದರೂ ಯಾತ್ರೆ ಅಥವಾ ಪಾದಯಾತ್ರೆ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಅಧಿಕಾರವಾಗಿದೆ. ಇದರ ಮೇಲೆ ಯಾವುದೇ ಸರ್ಕಾರ ನಿರ್ಬಂಧ ಹೇರುವ ಹಾಗಿಲ್ಲ.  
ಈ ಪರಿಕ್ರಮವನ್ನು ತಡೆಯುವ ಉ.ಪ್ರ. ಸರ್ಕಾರದ ಕ್ರಮವು ಪ್ರಜಾಪ್ರಭುತ್ವ ಹತ್ಯೆ ಹಾಗೂ ಹಿಂದೂ ಸಮಾಜಕ್ಕೆ ಅಪಮಾನಕರವಾದ ದಮನ ನೀತಿಯಾಗಿದೆ. ಕಾರಣ ತಾವು ತಮ್ಮ ಲೋಕತಾಂತ್ರಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಉತ್ತರ ಪ್ರದೇಶ ಸರ್ಕಾರವು ಹಿಂದೂ ಸಮಾಜದ ಸಂವಿಧಾನಬದ್ಧ ಅಧಿಕಾರವನ್ನು ಕಸಿದುಕೊಳ್ಳದಂತೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದೆ.
ಪ್ರತಿಭಟನೆಯಲ್ಲಿ ರವಿ ಸಿದ್ಲಿಂಗ್, ಬಿ.ಎಚ್. ಲದ್ವಾ, ಮೋಹನ ಮಾಳಶೆಟ್ಟಿ, ಪ್ರವೀಣ ಬನ್ಸಾಲಿ, ಮಾರುತಿ ಪವಾರ, ಅಜಯ ಸೋಳಂಕೆ, ಗಣೇಶ ಚವ್ಹಾಣ, ಶ್ರೀಧರ ಕುಲಕರ್ಣಿ, ಅಶೋಕ ಬ್ಯಾಹಟ್ಟಿ, ರಾಜೋಳಿ, ಮಾಧುಸಾ ಮೇರವಾಡೆ, ಜಗನ್ನಾಥಸಾ ಬಾಂಡಗೆ, ಕೀರ್ತಿ ಕಾಂಬಳೇಕರ್, ಷರಕ್ಷರಯ್ಯ ಹಿರೇಮಠ, ಮಲ್ಲಿಕಾರ್ಜುನ ರಮಾಣಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement