371ಜೆ ಕಲಂ ಮುಂಡರಗಿಗೂ ವಿಸ್ತರಿಸಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 27
ಮುಂಡರಗಿ ತಾಲೂಕು ನಂಜುಂಡಪ್ಪ ವರದಿ ಪ್ರಕಾರ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕಾಗಿದೆ. ಈ ತಾಲೂಕು ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಭಾಗದ ಜನರು ಹೈದ್ರಾಬಾದ್ ಕರ್ನಾಟಕಕ್ಕೆ ಜಾರಿಗೊಳಿಸಿರುವ ವಿಶೇಷ ಸೌಲಭ್ಯ ನೀಡುವ 371ಜೆ ಕಲಂನ್ನು ಮುಂಡರಗಿ ತಾಲೂಕಿಗೂ ಅನ್ವಯಿಸುವಂತೆ ಆಗ್ರಹಿಸಿ ಹೋರಾಟ ಪ್ರಾರಂಭಿಸಬೇಕಿದೆ ಎಂದು ಪತ್ರಕರ್ತ ಗಂಗಾಧರ ಕುಷ್ಟಗಿ ಹೇಳಿದರು.
ಅವರು ಸೋಮವಾರ ಮುಂಡರಗಿ ಪುರಸಭೆಯ ಗಾಂಧಿಭವನದಲ್ಲಿ 371ಜೆ ಕಲಂ ಮುಂಡರಗಿ ಭಾಗಕ್ಕೂ ಜಾರಿಯಾಗುವಂತೆ ಕುರಿತು ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಹೈದ್ರಾಬಾದ್ ಕರ್ನಾಟಕಕ್ಕೆ 371ಜೆ ಕಲಂ ಜಾರಿಯಾಗುವಲ್ಲಿ 25 ರಿಂದ 30 ವರ್ಷದ ಹೋರಾಟವಿದೆ. ವೈಜನಾಥ ಪಾಟೀಲ ಇವರ ಮುಖಂಡತ್ವದಲ್ಲಿ ಸತತ ಹೋರಾಟ ನಡೆಸಿ, ಸರ್ಕಾರಗಳ ಗಮನ ಸೆಳೆದಿರುವುದರಿಂದ ಇವತ್ತು ಈ ಸೌಲಭ್ಯ ಪ್ರಾಪ್ತಿಯಾಗಿದೆ. ಭಾವನಾತ್ಮಕವಾಗಿ ಮತ್ತು ಐತಿಹಾಸಿಕವಾಗಿ ಮುಂಡರಗಿ ತಾಲೂಕು ಹೈದ್ರಾಬಾದ್ ಕರ್ನಾಟಕಕ್ಕೆ ಒಳಪಡುತ್ತಿರುವುದರಿಂದ ಅಂತಹ ಸೌಲಭ್ಯಗಳನ್ನು ಈ ತಾಲೂಕಿಗೂ ನೀಡಿ ಎಂದು ಸರ್ಕಾರಕ್ಕೆ ಕೇಳುವುದು ಸೂಕ್ತವಾದದ್ದು. ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕು ಇದಾಗಿರುವುದರಿಂದ ವಿಶೇಷ ಸೌಲಭ್ಯ ನೀಡುವಂತೆ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುವುದು ಅವಶ್ಯವಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ಹೈದ್ರಾಬಾದ್ ರಜಾಕರ ಚಳವಳಿಯಲ್ಲಿಯೂ ಈ ಭಾಗದ ಶಿವಮೂರ್ತಿ ಸ್ವಾಮಿಗಳು, ಡಾ. ಸಿ.ಎಂ.ಚುರ್ಚಿಹಾಳಮಠ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಭಾಗದ ಜನರನ್ನು ಸಂಘಟಿಸಿ ಶಿಬಿರಗಳನ್ನು ನಡೆಸಿ ಚಳವಳಿಯಲ್ಲಿ ಭಾಗವಹಿಸುವಂತೆ ಮಾಡಿ ಗಮನ ಸೆಳೆದಿದ್ದರು. ಇವೆಲ್ಲ ವಿಷಯಗಳನ್ನು ಗಮನಿಸಿದಾಗ ಹೈದ್ರಾಬಾದ್ ಕರ್ನಾಟಕಕ್ಕೆ ಮುಂಡರಗಿ ತಾಲೂಕೂ ಒಳಪಡುವುದು ಖಚಿತವೆನಿಸುತ್ತದೆ ಎಂದರು.
ನಂಜುಂಡಪ್ಪ ವರದಿ ಪ್ರಕಾರ ಮುಂಡರಗಿ ತಾಲೂಕು ಹಿಂದುಳಿದ ತಾಲೂಕಿನ ಪಟ್ಟಿಗೆ ಸೇರಿರುವುದರಿಂದ ಮತ್ತು 2008ರ ಲೋಕಸಭಾ ಕ್ಷೇತ್ರದ ಮರುವಿಂಗಡನೆಯ ಮುಂಚೆ ಮುಂಡರಗಿ ಭಾಗವನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಡರಗಿ ತಾಲೂಕು ಭಾವನಾತ್ಮಕವಾಗಿ ಕೊಪ್ಪಳ ಭಾಗಕ್ಕೆ ಸೇರಿರುವುದರಿಂದ 371ನೇ ಕಲಂನ ಸೌಲಭ್ಯಗಳು ಈ ಭಾಗಕ್ಕೂ ವಿಸ್ತರಿಸಬೇಕು. ಶಿಕ್ಷಣಕ್ಕೆ ಮತ್ತು ಉದ್ಯೋಗವಕಾಶಕ್ಕೆ ಸಿಗುವ ಪ್ರಾತಿನಿಧ್ಯವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ 371ಜೆ ಕಲಂ ಮುಂಡರಗಿ ತಾಲೂಕಿಗೂ ವಿಸ್ತರಿಸುವ ಹಕ್ಕೊತ್ತಾಯ ನಿರ್ಣಯವನ್ನು ಕೈಗೊಳ್ಳಲಾಯಿತು. ಎ.ಕೆ. ಬೆಲ್ಲದ, ಹೇಮಂತಗೌಡ ಪಾಟೀಲ, ಪ್ರಾ. ಎಂ.ಬಿ. ಬೆಳವಟಗಿಮಠ, ರವೀಂದ್ರ ಉಪ್ಪಿನಬೆಟಗೇರಿ, ಡಿ.ಡಿ. ಮುರನಾಳ, ಆನಂದಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ಕಾಂತರಾಜ ಹಿರೇಮಠ, ಜುಟ್ಲಣ್ಣವರ, ಬಸವರಾಜ ದೇಸಾಯಿ, ರಾಮಣ್ಣ ಬಳ್ಳಾರಿ, ಪ್ರೊ. ಎ.ಜಿ. ಕಡ್ಡಿ, ಬಸವರಾಜ ನವಲಗುಂದ ಮುಂತಾದವರಿದ್ದರು. ಪ್ರಾರಂಭದಲ್ಲಿ ಕೊಟ್ರೇಶ ಅಂಗಡಿ ಸ್ವಾಗತಿಸಿದರು. ಕಾಂತರಾಜ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಕೆ. ಮುಲ್ಲಾನವರ ನಿರೂಪಿಸಿದರು.