ಸುದ್ದಿ ಸಂಕ್ಷೇಪ
ಇಂದು ಬಿಡುಗಡೆ
ಗದಗ: ರಾಜ್ಯದ ನೂತನ ಸರ್ಕಾರವು 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ 100 ದಿನಗಳಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರಗಳನ್ನು ಒಳಗೊಂಡಿರುವ ನೂರು ದಿನ-ನೂರಾರು ನಿರ್ಣಯ ಎನ್ನುವ ಕಿರು-ಹೊತ್ತಿಗೆ ಬಿಡುಗಡೆ ಕಾರ್ಯಕ್ರಮವು ಆ. 28 ರಂದು ಸಂಜೆ 4.30 ಗಂಟೆಗೆ ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಕಿರುಹೊತ್ತಿಗೆ ಬಿಡುಗಡೆ ಮಾಡುವರು. ಜಿಲ್ಲೆಯ ಎಲ್ಲ ತಾಲೂಕುಗಳ ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು. ಸರ್ಕಾರದ ನೂರು ದಿನಗಳ ಈ ಕಿರು-ಹೊತ್ತಿಗೆಯನ್ನು ರಾಜ್ಯ ವಾರ್ತಾ ಇಲಾಖೆಯು ಹೊರತಂದಿದ್ದು, ಸರ್ಕಾರದ ಮಹತ್ವದ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶವನ್ನು ಈ ಕಿರುಹೊತ್ತಿಗೆ ಹೊಂದಿದೆ.
ಇಂದಿನಿಂದ ಕಾನೂನು ಸಾಕ್ಷರತೆ, ಜನತಾ ನ್ಯಾಯಾಲಯ
ರೋಣ: ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಿವಿಧ ಇಲಾಖೆ ಹಾಗೂ ಸಂಘಟನೆಗಳ ಆಶ್ರಯದಲ್ಲಿ ಆಗಸ್ಟ್ 28ರಿಂದ ಆ. 30ರವರೆಗೆ ಮೂರು ದಿನಗಳ ಕಾಲ ರೋಣ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಲಯ ಕಾರ್ಯಕ್ರಮಗಳು ಜರುಗಲಿವೆ. ಆ. 28ರಂದು ನ್ಯಾಯಾಲಯದ ಆವರಣದಲ್ಲಿ ಜರುಗುವ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಚ್. ಆವಿನ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ತಾಲೂಕು ವಕೀಲ ಸಂಘದ ಅಧ್ಯಕ್ಷ ಐ.ಎಂ.ಪಾಟೀಲ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಡಿ. ಮಹಾವರಕರ, ಸಹಾಯಕ ಸರ್ಕಾರಿ ಅಭಿಯೋಜಕ ನಾರಾಯಣ ಆರಿ, ಹಿರಿಯ ನ್ಯಾಯವಾದಿ ವಿ.ಆರ್. ಗುಡಿಸಾಗರ, ಕೆ.ಜಿ. ಉಡುಪಿ, ವಿ.ಎ.ದಿಂಡೂರ, ವಿ.ಡಿ. ಪವಾಸ್ಕರ ಉಪಸ್ಥಿತರಿರುವರು. ಇವರಿಂದ ಮದ್ಯಸ್ಥಿಕೆ, ಉಚಿತ ಕಾನೂನು ಸಲಹಾ ಕೇಂದ್ರ ಮತ್ತು ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಗಳ ಕುರಿತು ನ್ಯಾಯವಾದಿ ಜಿ.ಆರ್. ಯಳವತ್ತಿ ಇವರಿಂದ ಉಪನ್ಯಾಸ ಜರುಗಲಿದೆ.
ಕಾರ್ಯಾಗಾರ ಯಶಸ್ವಿ
ಗಜೇಂದ್ರಗಡ: ಸ್ಥಳೀಯ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಸಭಾ ಮಂದಿರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆ. 31 ರಂದು ನಡೆಯಲಿರುವ ಓಲಂಪಿಯಡ್ ಸ್ಪರ್ಧಾ ಪರೀಕ್ಷೆ ನಿಮಿತ್ತ ವಿಶೇಷ ಕಾರ್ಯಾಗಾರ ಈಚೆಗೆ ಪಟ್ಟಣದ ಜಿ.ಎಚ್.ಎಸ್. ಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಾಗಾರದ ಅಧ್ಯಕ್ಷತೆವಹಿಸಿದ್ದ ಮುಖ್ಯೋಪಾಧ್ಯಾಯ ಎಸ್.ಎಫ್. ಜಾಲಿಹಾಳ ಮಾತನಾಡಿದರು. ಗಣಿತ ಶಿಕ್ಷಕ ಕೆ.ಎಸ್. ಮುಶಿಗೇರಿ, ಕೆ.ಎಸ್. ರಾಜೂರ ಹಾಗೂ ವಿಜ್ಞಾನ ಶಿಕ್ಷಕ ಎಸ್.ಎಚ್. ಬಂಡಿವಡ್ಡರ, ಬಿ.ಬಿ. ಸುಗ್ಗಿ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.