ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿವೇಕ ರಥಯಾತ್ರೆ ಅದ್ಧೂರಿ ಮೆರವಣಿಗೆ

Mainashree
Updated On : 29 Aug 2013, 10:50 am

ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗದಗ, ಆ. 28

ಮೇರು ಸದೃಶ್ಯ ವ್ಯಕ್ತಿತ್ವ ಹೊಂದಿ ಭಾರತದ ವಿಚಾರ ಧಾರೆಗಳನ್ನು ವಿಶ್ವಕ್ಕೆ ಪಸರಿಸಿದ ಸ್ವಾಮಿ ವಿವೇಕಾನಂದರ ರಥಯಾತ್ರೆಯ ಬೃಹತ್ ಮೆರವಣಿಗೆಯು ಗದಗ-ಬೆಟಗೇರಿ ಅವಳಿ ನಗರದ ಇತಿಹಾಸದಲ್ಲಿಯೇ ನಭೋತೋ ನಭವಿಷ್ಯತಿ ಎಂಬಂತೆ ಅತ್ಯಾಕರ್ಷಕವಾಗಿ ಜರುಗಿ ನೋಡುಗರಲ್ಲಿ ಭಾರತೀಯರೆಂಬ ಗರ್ವ ಮೂಡಿಸುವಲ್ಲಿ ಯಶಸ್ವಿಯಾಯಿತು.
ಬುಧವಾರ ಬೆಳಗ್ಗೆ ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸ್ವಾಮಿವಿವೇಕಾನಂದರ ರಥಯಾತ್ರೆಯ ಮೆರವಣಿಗೆಗೆ ನಗರದ ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ವಿವೇಕಾನಂದರ ಮೂರ್ತಿಗೆ ಮಾಲೆ ಹಾಕುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯು ಪ್ರಾರಂಭದಲ್ಲಿ ಗಜರಾಜ ರಾಜಗಾಂಭಿರ್ಯತೆಯಿಂದ ಹೆಜ್ಜೆ ಹಾಕುವ ಮೂಲಕ ದೇಶಾಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದು ಮೆರವಣಿಗೆಗೆ ಕಳೆ ಕಟ್ಟಿತ್ತು. ಸ್ವಾಮಿ ವಿವೇಕಾನಂದರ 150ನೇ ಜಯಂತಿಯ ಹಿನ್ನೆಲೆಯಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳ 150 ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವೇಷಧಾರಿಗಳಾಗಿ ಪಾಲ್ಗೊಂಡು ಜನಮನ ಸೆಳೆದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಹೆಜ್ಜೆಮೇಳ, ಕೋಲಾಟ ತಂಡ, ಜಾಂಜಮೇಳದ ಲಯಬದ್ಧ ಸಂಗೀತ, ಕರಡಿಮಜಲು, ಲಂಬಾಣಿ ಸಮುದಾಯದ ಮಹಿಳೆಯರ ಸಾಂಪ್ರದಾಯಿಕ ನೃತ್ಯ, ನೂರಾರು ಮಹಿಳೆಯರು ಪೂರ್ಣ ಕುಂಭಸ್ವಾಗತ ನೀಡುವ ಮೂಲಕ ರಥಯಾತ್ರೆಗೆ ವಿಶೇಷ ಮೆರುಗು ಮೂಡಿಸಲಾಯಿತು.
ಮೆರವಣಿಗೆಯಲ್ಲಿ ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಡಾ. ಬಿ.ಎಫ್. ದಂಡಿನ, ಪ್ರೊ. ತಳಗೇರಿ, ಜೆ.ಕೆ. ಜಮಾದಾರ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ರಾಮಣ್ಣ ಫಲದೊಡ್ಡಿ, ಗಣೇಶಸಿಂಗ್ ಬ್ಯಾಳಿ, ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ಬಸಣ್ಣ ಮಲ್ಲಾಡದ, ಪರಶುರಾಮ ಜಾಧವ, ಡಾ. ಅನಂತ ಶಿವಪುರ, ವಾಣಿ ಶಿವಪುರ, ನಗರಸಭಾ ಸದಸ್ಯರಾದ ಎಲ್.ಡಿ. ಚಂದಾವರಿ, ಎಂ.ಸಿ. ಶೇಖ, ಮಂಜುನಾಥ ಪೂಜಾರ, ಅನಿಲ ಗರಗ, ಅನಿಲ ಶಿಂಗ್ಟಾಲಕೇರಿ, ಶ್ರೀನಿವಾಸ ಹುಯಿಲಗೋಳ, ಆರ್.ಎನ್.ದೇಶಪಾಂಡೆ, ಸಿ.ಬಿ.ಬಡ್ನಿ, ಬಾಲಚಂದ್ರ ಭರಮಗೌಡ್ರ, ಉಮರಫಾರೂಖ ಹುಬ್ಬಳ್ಳಿ, ಶಫಿ ನವಲಗುಂದ, ಎಸ್.ಎನ್. ಬಳ್ಳಾರಿ, ಹೇಮಂತ ಬೂಮಕ್ಕನವರ, ಮೋಹನ ದುರ್ಗಣ್ಣವರ, ಅಶೋಕ ಮಂದಾಲಿ ರಥಯಾತ್ರೆಗೆ ಭವ್ಯ ಸ್ವಾಗತ ಕೋರಿ ಸಂಭ್ರಮಿಸಿದರು.
ಮೆರವಣಿಗೆಗೆ ಹರಿದ ಬಂತು ಜನಸಾಗರ
ಅವಳಿ ನಗರದ ವಿವಿಧ ಶಾಲಾ ಕಾಲೇಜುಗಳ ಸುಮಾರು 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ನಗರದ ಸರ್ವ ಕ್ಷೇತ್ರಗಳ ಗಣ್ಯರು ಸೇರಿದಂತೆ ಸುಮಾರು 20 ಸಾವಿರಕ್ಕೂ ಅಧಿಕ ಜನರು ಜಾತಿ-ಮತ-ಧರ್ಮಗಳ ಪರಿಧಿಯನ್ನು ದಾಟಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕೋಮುಸೌರ್ಹಾದತೆಗೆ ಹೆಸರಾದ ನಗರಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು ವಿಶೇಷತೆ ಹೊಂದಿತ್ತು. ಮೆರವಣಿಗೆಯು ನಗರದ ಬನ್ನಿಕಟ್ಟೆ ವೃತ್ತ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ ವೃತ್ತ, ಗಾಂಧಿವೃತ್ತದ ಮೂಲಕ ಸಭಾಸ್ಥಳ ನಗರಸಭೆಯ ಕಾಲೇಜು ಮೈದಾನಕ್ಕೆ ತಲುಪಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement