ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಕಸರತ್ತು

Mainashree
Updated On : 30 Aug 2013, 10:45 am

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ. 29
ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ ಬೆನ್ನಲ್ಲೇ ಪಟ್ಟಣದಲ್ಲಿ ರಾಜಕೀಯ ಕಸರತ್ತು ಶುರುವಾಗಿದೆ.
ಚುನಾವಣೆ ನಡೆದು 5 ತಿಂಗಳಾದರೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಅಧಿಕಾರ ಭಾಗ್ಯ ಸಿಗದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಸರ್ಕಾರದ ಆದೇಶಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಸುಸ್ತಾಗಿದ್ದರು. ಕೊನೆಗೂ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸಿದ ಕ್ಷಣದಿಂದ ಆಡಳಿತ ಚುಕ್ಕಾಣಿಗಾಗಿ ಕಸರತ್ತು ಪ್ರಾರಂಭವಾಗಿದೆ.
ಕೈತಪ್ಪಿದ ಪುರುಷರ ಆಡಳಿತ: ಸ್ಥಳೀಯ ಪುರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಸ್ಥಾನಗಳು ಸಾಮಾನ್ಯ ಮಹಿಳೆಗೆ ಮೀಸಲು ಪ್ರಕಟಗೊಂಡಿದ್ದು, ಪುರುಷ ಸದಸ್ಯರಿಗೆ ಅಧಿಕಾರ ಭಾಗ್ಯ ಕೈ ತಪ್ಪಿರುವುದು ಅವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಪುರಸಭೆಯಲ್ಲಿ 23 ಚುನಾಯಿತ ಪ್ರತಿನಿಧಿಗಳಿದ್ದು, ಅದರಲ್ಲಿ ಬಿಜೆಪಿ-17, ಕಾಂಗ್ರೆಸ್-5 ಹಾಗೂ ಓರ್ವ ಸಿಪಿಐ (ಎಂ) ಸದಸ್ಯರಿದ್ದು, 17 ಸದಸ್ಯರನ್ನು ಹೊಂದಿದ ಬಿಜೆಪಿಯಲ್ಲಿ ನಾಲ್ವರು ಮಹಿಳಾ ಸದಸ್ಯರಿದ್ದು ಅಧಿಕಾರ ನಡೆಸಲು ಬೇಕಾದ ಸ್ಪಷ್ಟ ಬಹುಮತ ಬಿಜೆಪಿಗೆ ಇದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ನಾಲ್ವರು ಮಹಿಳಾ ಸದಸ್ಯರು ಪಕ್ಷದ ವರಿಷ್ಠರ ದುಂಬಾಲು ಬಿದ್ದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕವಿತಾ ಜಾಲಿಹಾಳ, ವಿಜಯಲಕ್ಷ್ಮಿ ಚಟ್ಟೇರ, ತೀವ್ರ ಪೈಪೋಟಿ ನಡೆಸಿದ್ದಾರೆನ್ನಲಾಗಿದೆ. ಇನ್ನುಳಿದ ಅಕ್ಕಮ್ಮ ಜಾನಾಯಿ, ಸುಮಿತ್ರಾ ತೊಂಡಿಹಾಳ ಕೂಡ ನಾವೇನು ಕಮ್ಮಿ ಇಲ್ಲ ಎನ್ನುವಂತೆ ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಇದೆಲ್ಲದರ ಮಧ್ಯೆ ಬಿಜೆಪಿ ಹೈಕಮಾಂಡ್ ಯಾರ ಹೆಸರನ್ನು ಅಧ್ಯಕ್ಷ ಗಾದಿಗೆ ಸೂಚಿಸುವರೋ ಅವರೇ ಅಧ್ಯಕ್ಷರಾಗಲಿ, ಪಕ್ಷದ ಮುಖಂಡರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎನ್ನುವ ಮಾತು ಕೇಳಿ ಬರುತ್ತಿದೆ.
ವ್ಯಕ್ತಿಗಿಂತ ಪಕ್ಷದ ಘನತೆ ಮುಖ್ಯ. ಈ ದಿಸೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನ ಅಂತಿಮ ಎನ್ನುವುದು ಹಲವು ಸದಸ್ಯರ ಅಭಿಪ್ರಾಯವಾಗಿದೆ. ಆದರೂ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆ ಏರಲು ಬಿಜೆಪಿಯ ಮಹಿಳಾ ಮಣಿಗಳು ಒಳಗೊಳಗೆ ಮುಸಕಿನ ಗುದ್ದಾಟ ನಡೆಸಿರುವುದು ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನ್ಯಾಯಾಲಯದ ಮೊರೆ ಹೋಗಲು ಚಿಂತನೆ: ಪುರಸಭೆಯಲ್ಲಿ ಕಳೆದ ಅವಧಿಯಲ್ಲಿ ಮಹಿಳೆಯರಿಗೆ ಅಗ್ರ ಸ್ಥಾನ ನೀಡಲಾಗಿತ್ತು. ಈ ಬಾರಿಯಾದರೂ ಪುರುಷರಿಗೆ ಅಧಿಕಾರ ಭಾಗ್ಯ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಸದಸ್ಯರಿಗೆ ಮತ್ತೆ ನಿರಾಸೆಯಾಗಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗಲು ಕೆಲ ಸದಸ್ಯರು ಕಾನೂನು ತಜ್ಞರಲ್ಲಿ ಚರ್ಚೆಗೆ ಮುಂದಾಗಿದ್ದಾರೆನ್ನುವ ಸುದ್ದಿ ಪಟ್ಟಣದಲ್ಲಿ ಹರಡಿದೆ. ಆದರೆ, ಇದು ವ್ಯರ್ಥ ಪ್ರಯತ್ನವಾಗಲಿದೆ. ಕಾರಣ ಈಗಾಗಲೇ ಚುನಾವಣೆ ನಡೆದು 5 ತಿಂಗಳು ಕಳೆದು, ಸ್ಥಳೀಯ ಆಡಳಿತ ಯಂತ್ರ ಕುಂಠಿತವಾಗಿರುವುದರಿಂದ ನ್ಯಾಯಾಲಯ ಮೊರೆ ಹೊಗುವುದು ಸೂಕ್ತವಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಈ ಮಧ್ಯೆ 5 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಕೂಡ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಕಾದು ನೋಡುತ್ತಿದೆ. ಅಧಿಕಾರ ಗದ್ದುಗೆ ಏರಲು ಬೇಕಾಗುವ ಸಂಖ್ಯಾ ಬಲವಿಲ್ಲದಿದ್ದರೂ ಬಿಜೆಪಿಯ ಆಂತರಿಕ ನಡೆ ಮೇಲೆ ನಿಗಾವಹಿಸಿದೆ. ಮೇಲ್ನೋಟಕ್ಕೆ ಕೆಲ ಕಾಂಗ್ರೆಸ್ ಮುಖಂಡರು ನಮಗೆ ಅಧಿಕಾರಕ್ಕಿಂತ ಪಟ್ಟಣದ ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಪುರಸಭೆಯಲ್ಲಿ ತನ್ನ ಜವಾಬ್ದಾರಿ ನಿರ್ವಹಿಸಲಿದೆ ಎಂದು ತಿಳಿಸುತ್ತಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement