ಎನ್ನೆಸ್ಸೆಸ್ದಿಂದ ಸೇವಾ ಮನೋಭಾವನೆ: ಕೆಂಚರಡ್ಡಿ
ಗಜೇಂದ್ರಗಡ: ಮಹಾತ್ಮಾ ಗಾಂಧೀಜಿಯವರ ಕನಸಿನ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನದ ಜತೆಗೆ ಸಾಮಾಜಿಕ ಸೇವಾ ಮನೋಭಾವನೆ ಮೂಡುತ್ತದೆ ಎಂದು ಪ್ರೊ. ಬಿ.ಎ ಕೆಂಚರಡ್ಡಿ ಹೇಳಿದರು. ಅವರು ಈಚೆಗೆ ಸ್ಥಳಿಯ ಎಸ್.ಎಂ. ಭೂಮರಡ್ಡಿ ಪಪೂ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ನಡೆದ ಸ್ವಯಂ ಸೇವಕರಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೆ ಮಾನಸಿಕ ಶ್ರಮದ ಜತೆಗೆ ದೈಹಿಕ ಶ್ರಮವು ಅವಶ್ಯ ಈ ದಿಸೆಯಲ್ಲಿ ಯುವಕರು ಸಮುದಾಯದ ಬದಲಾವಣೆ ಹಾಗೂ ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ದೈಹಿಕ ಶ್ರಮದಲ್ಲಿ ತೊಡಗಿ, ದೊರೆತ ಅವಕಾಶ ಸದುಪಯೋಗ ಪಡಿಸಿಕೊಂಡು ಯುವ ಸಮೂಹ ತಮ್ಮ ಅಮೂಲ್ಯ ಜೀವನವನ್ನು ಭವ್ಯ ರಾಷ್ಟ್ರದ ನಿರ್ಮಾಣಕ್ಕೆ ಮೀಸಲಿಡಿ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಎನ್. ಶಿವರೆಡ್ಡಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ನಡೆಯುವ ಎನ್.ಎಸ್.ಎಸ್ದಂತಹ ಯೋಜನೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯ ಜತೆಗೆ ಸಾಮಾಜಿಕ ಚಿಂತನೆಯ ಅರಿವು ಮೂಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ ಯೋಜನೆಯ ಸದುಪಯೋಗ ಪಡಿಸಿಕೊಂಡು ಉತ್ತಮ ಸಮಾಜ ಪರಿವರ್ತನೆಗೆ ಮುಂದಾಗಿ ಎಂದರು. ಉಪನ್ಯಾಸಕ ಜಿ.ಬಿ. ಗುಡಿಮನಿ. ಜೆ.ಜಿ. ಕುದರಿ ಉಪಸ್ಥಿತರಿದ್ದರು.