ನೀರು ಮಿತವ್ಯಯವಾಗಿ ಬಳಸಿ: ಹಳ್ಳಿಕೇರಿ
ನರೇಗಲ್ಲ: ನೀರು ಜೀವನ ಸಂಜೀವಿನಿಯಾಗಿದ್ದು, ಮಾನವನ ಅಗತ್ಯಗಳಲ್ಲಿ ನೀರು ಅತ್ಯಂತ ಅವಶ್ಯಕ ನೈಸರ್ಗಿಕ ಸಂಪನ್ಮೂಲವಾಗಿದ್ದು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನರೇಗಲ್ಲ ಗೃಹರಕ್ಷಕ ದಳದ ಘಟಕಾಧಿಕಾರಿ ಸುರೇಶ ಹಳ್ಳಿಕೇರಿ ಹೇಳಿದರು. ಅವರು ಶನಿವಾರ ಸ್ಥಳೀಯ ಕೆಎಸ್‌ಎಸ್ ಪ್ರೌಢ ಶಾಲೆಯಲ್ಲಿ ಗೃಹರಕ್ಷಕ ದಳದ ವತಿಯಿಂದ ನಡೆದ ವಿಶ್ವ ಜಲವರ್ಷ-2013 ಶೀರ್ಷಿಕೆಯಡಿಯಲ್ಲಿ ಜಲ ಸಹಕಾರ, ಸವಾಲು ಮತ್ತು ಸಮಸ್ಯೆಗಳ ಕುರಿತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ನೀರಿನ ಬಳಕೆಯ ಅರಿವು, ನೀರಿನ ಸಂಗ್ರಹಣಾ ಕ್ರಮಗಳು, ಅರಣ್ಯಗಳ ಸಂರಕ್ಷಣೆ ಹಾಗೂ ಅರಣ್ಯಗಳನ್ನು ಬೆಳೆಸುವುದು, ಮಳೆ ನೀರು ಸಂಗ್ರಹಣೆಗಾಗಿ ಚೆಕ್ ಡ್ಯಾಂಗಳ ನಿರ್ಮಾಣ, ನೀರು ಕುಯಿಲು, ನೀರಿನ ಇಂಗು ಗುಂಡಿಗಳು, ಕೆರೆಗಳ ನಿರ್ಮಾಣದಂತಹ ಯೋಜನೆಗಳು ಫಲಪ್ರದವಾಗಬೇಕಾದರೆ ರೈತರು ಜನಸಾಮಾನ್ಯರು ನೀರಿನ ಮಹತ್ವವನ್ನು ತಿಳಿಯುವ ಅಗತ್ಯವಿದೆ ಎಂದರು. ಜಕ್ಕಲಿಯ ಮಲಕಾಜಪ್ಪ ಮೆಣಸಗಿ ಮಾತನಾಡಿ, ಜಲಸಹಕಾರದ ಸವಾಲುಗಳು ಮತ್ತು ಸಮಸ್ಯೆಗಳನ್ನು ಅರಿತುಕೊಳ್ಳುವ ಮೂಲಕ ಪ್ರಕೃತಿದತ್ತ ಕೊಡುಗೆಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಎನ್.ಕೆ. ಬೇವಿನಕಟ್ಟಿ, ಈಶ್ವರ ಬೆಟಗೇರಿ, ಶಿವಾನಂದ ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೃಹರಕ್ಷಕ ಜೆ.ಡಿ.ಬಂಡಿವ್ವಡರ ಹಾಗೂ ಶರಣಪ್ಪ ಗೊಡಚಪ್ಪನವರ ನಿರೂಪಿಸಿದರು. ವೈ.ಎನ್. ಸಾಬಳೆ ವಂದಿಸಿದರು.