ಬಸವರಾಜ ರಾಜಗುರು ಸಂಗೀತದ ಸರದಾರ
ಗದಗ: ಹಿಂದೂಸ್ತಾನಿ ಗಾಯಕರಾಗಿದ್ದ ಲಿಂ.ಪಂ. ಬಸವರಾಜ ರಾಜಗುರು ಸಂಗೀತದ ಸರದಾರರಾಗಿದ್ದರು. ಸಂಗೀತದ ಸಾವಿರಾರು ಚೀಜ್‌ಗಳು ಇವರಿಂದ ಬೆಳೆದು ಹೆಮ್ಮರವಾದವು ಎಂದು ಜ. ತೋಂಟದ ಡಾ. ಸಿದ್ದಲಿಂಗ ಶ್ರೀ ಹೇಳಿದರು.
ಅವರು ಈಚೆಗೆ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ನಡೆದ 2124ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ಹಾಗೂ ಶ್ರೀಮಠದ ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಪ್ರಕಟಿತ ಹಾಗೂ ಬೆಳಗಾವಿಯ ಶಿರೀಷ ಜೋಶಿ ಅವರು ಬರೆದ ಲಿಂ.ಪಂ. ಬಸವರಾಜ ರಾಜಗುರು ಗ್ರಂಥವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಧಾರವಾಡ ಮೂಲದ ಹಿಂದೂಸ್ತಾನಿ ದಿಗ್ಗಜರಾದ ಪಂ. ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಸವಾಯಿ ಗಂಧರ್ವರು ಸಂಗೀತ ರಸಗಂಗೆಯ ದಿಗ್ಗಜರು. ಇವರು ದೇಶದೆಲ್ಲೆಡೆ ಸಂಗೀತ ಸಾಧಕರಾಗಿದ್ದುಕೊಂಡು ಸಂಗೀತದ ಸುಧೆಯೊಂದಿಗೆ ಕನ್ನಡದ ಕೀರ್ತಿಯನ್ನೂ ಹೆಚ್ಚಿಸಿದರು. ಪಂ. ಬಸವರಾಜ ರಾಜಗುರು ಅವರದು ವೈಶಿಷ್ಟ್ಯಪೂರ್ಣ ವ್ಯಕ್ತಿತ್ವ ಲಿಂ. ಪಂಚಾಕ್ಷರ ಗವಾಯಿಗಳಲ್ಲಿ 12 ವರ್ಷ ನೆಲೆ ನಿಂತು ಸಂಗೀತ ಶಿಕ್ಷಣ ಪಡೆದರು. ಬಸವರಾಜರು ಕೇವಲ ಹಿಂದೂಸ್ತಾನಿ ಗಾಯಕರಲ್ಲ. ಕ್ಲಾಸಿಕಲ್, ನಾಟ್ಯಗೀತೆ, ರಂಗಗೀತೆ ದಾದರಾ ಎಲ್ಲ ಪ್ರಕಾರದ ಹಾಡುಗಳಿಗೆ ಜೀವತುಂಬುತ್ತಿದ್ದರು. ಅಪಾರ ಸಂಖ್ಯೆಯ ಶಿಷ್ಯರು ಅಭಿಮಾನಿ ಬಳಗ ಹೊಂದಿದ್ದ ಇವರು ಉಪಯುಕ್ತ ಬರಹಗಾರರಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದು ವಿಶೇಷ ಎಂದರು.
ಗ್ರಂಥಕರ್ತ ಬೆಳಗಾವಿಯ ಶಿರೀಷ ಜೋಶಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು. ಲಿಂ.ಪಂ. ಬಸವರಾಜ ರಾಜಗುರು ಅವರ ಧರ್ಮಪತ್ನಿ ಭಾರತೀದೇವಿ, ಪುತ್ರ ನಿಜಗುಣ ರಾಜಗುರು, ಎಂ.ಎ. ಹಂಚನಾಳ, ಲಕ್ಷ್ಮಿಬಾಯಿ ಬಿರಾದಾರ, ಚೆನ್ನಮ್ಮ ಇಲಕಲ್, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾತಾಯಿ ಕುರಡಗಿ, ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಗುರುಬಸವಲಿಂಗ ತಡಸದ, ಖಜಾಂಚಿ ಪ್ರಭಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿ ಚೇರ್‌ಮನ್ ಪ್ರೊ. ಎಸ್.ಎನ್. ಆದಿ ಸ್ವಾಗತಿಸಿದರು. ಎಸ್.ಎಂ. ವಾಲಿ ನಿರೂಪಿಸಿದರು.