ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಳೆ ಕೊರತೆ: ಜನರಲ್ಲಿ ಹೆಚ್ಚಿದ ಚಿಂತೆ

Mainashree
Updated On : 30 Aug 2013, 10:44 am

ಕನ್ನಡಪ್ರಭ ವಾತೆ, ಗದಗ, ಆ. 29
ಸತತ 2 ವರ್ಷದ ಬರಗಾಲದಿಂದ ಹಲವಾರು ರೀತಿಯ ಕೆಟ್ಟ ಪರಿಣಾಮ ಬೀರುತ್ತಿದ್ದು, ಶಾಶ್ವತ ಬರ ಪೀಡಿತ ಗದಗ ಜಿಲ್ಲೆಯ ಜನರ ಬದುಕು ದುಸ್ಥರವಾಗಿದೆ.
ರೋಣ, ಮುಂಡರಗಿ, ಗದಗ ಹಾಗೂ ನರಗುಂದ ತಾಲೂಕಿನ ವ್ಯಾಪ್ತಿಗಳ ಗ್ರಾಮದಲ್ಲಿ ಅಂತರ್ಜಲಮಟ್ಟ 300 ಅಡಿ ಆಳಕ್ಕೆ  ಕುಸಿದಿದ್ದು, ಕುಡಿಯುವ ನೀರಿಗೆ ಹಾಗೂ ಕೊಳವೆಬಾವಿ ನೀರಾವರಿಯನ್ನು ಆಶ್ರಯಿಸಿರುವ ರೈತರು ಆತಂಕ ಎದುರಿಸುವಂತಾಗಿದೆ.
ಗದಗ ಜಿಲ್ಲೆಯಲ್ಲಿ ಈ ಹಿಂದೆ 200 ರಿಂದ 250 ಅಡಿಗೆ ಅಂತರ್ಜಲ ಲಭ್ಯವಾಗುತ್ತಿತ್ತು, ಆದರೆ ಮಳೆ ಕೊರತೆಯಿಂದ ಸದ್ಯ 300 ರಿಂದ 350 ಅಡಿಗಳವರೆಗೂ ಕೊಳವೆಬಾವಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದಿಂದ ಕಳೆದ ಒಂದು ವಾರದಿಂದ 50 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಅವುಗಳಲ್ಲಿ 28 ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗಿಲ್ಲ. ಇದು ಆಡಳಿತ ವರ್ಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಳೆಗಾಲದಲ್ಲಿಯೇ ಕೆರೆಯಲ್ಲಿ ನೀರಿಲ್ಲ: ಈ ಹಿಂದೆ ಅಲ್ಲಲ್ಲಿ ಕೆರೆಯಲ್ಲಿ ನೀರು ಲಭ್ಯವಿರುತ್ತಿತ್ತು. ಆದರೆ ಈ ಬಾರಿ ಮಳೆಗಾಲದಲ್ಲಿಯೇ ಕೆರೆಯಲ್ಲಿ ನೀರಿಲ್ಲ. ಕೊಳವೆ ಬಾವಿ ಕೊರೆಯಿಸಿದರೂ ಅಲ್ಲೂ ನೀರು ಸಿಗುತ್ತಿಲ್ಲ. ಹೀಗಾಗಿ ಜಾನುವಾರುಗಳನ್ನು ಸಾಕಿಕೊಂಡಿರುವ ಗ್ರಾಮೀಣ ಜನರಿಗೆ ಜೀವ ಜಲ ಎನ್ನುವುದು ಮರೀಚಿಕೆಯಾಗಿದೆ. ಈ ಸಮಸ್ಯೆಗಳಿಂದ ಕಂಗೆಟ್ಟಿರುವ ರೈತರು ನೀರಿನ ಕೊರತೆಯಿಂದ ಜಾನುವಾರುಗಳನ್ನು ಸಾಕುವುದೇ ಕಷ್ಟ ಸಾಧ್ಯವಾಗಿದೆ.  
ಬೆಳೆಗಳಿಗೂ ತೊಂದರೆ: ಮಳೆ ಕೊರತೆಯಿಂದ ಕೊಳವೆ ಬಾವಿ ನೀರಾವರಿಯನ್ನು ಹೊಂದಿರುವ ರೈತರಿಗೂ ಅಂತರ್ಜಲಮಟ್ಟ ಕುಸಿತ ಸಮಸ್ಯೆಯಾಗಿ ಪರಿಣಮಿಸಿದೆ. ಸಿಗುವ ಅಲ್ಪ ವಿದ್ಯುತ್‌ನಲ್ಲಿಯೇ ಹೊಲದಲ್ಲಿ ನೀರಾವರಿ ಶೇಂಗಾ, ಗೋವಿನ ಜೋಳ, ಬಿ.ಟಿ. ಹತ್ತಿ ಹಾಗೂ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದು, ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹೊರಬರುತ್ತಿಲ್ಲ. ಹಾಗಾಗಿ ದಿನದ 24 ಗಂಟೆ ರೈತರು ಕಾದು ಕುಳಿತು ಬೆಳೆಗೆ ನೀರು ಹಾಯಿಸಿದರೂ ಬೆಳೆಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ.


ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement