ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಳ್ಳಿ: ದತ್ತಪ್ರಸನ್ನ ಪಾಟೀಲ್
ಗದಗ: ಭಾರತೀಯ ಸಂಸ್ಕೃತಿಯ ಬೆನ್ನೆಲುಬಾದ ಧರ್ಮವನ್ನು ಸಂರಕ್ಷಿಸುವುದರ ಜತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ರೂಢಿಸಿಕೊಂಡಾಗ ಮಾನವನ ಬದುಕು ಮೌಲ್ಯಯುತವಾಗುತ್ತದೆ ಎಂದು ವಿ.ಡಿ.ಎಸ್. ಪಪೂ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರೊ. ದತ್ತಪ್ರಸನ್ನ ಪಾಟೀಲ್ ಹೇಳಿದರು.
ನಗರದ ಶಿವಾನಂದ ಪಪೂ ವಿಜ್ಞಾನಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸದ್ಭಾವನಾ ದಿನ ಹಾಗೂ ಸಾಂಸ್ಕೃತಿಕ ಏಕತಾದಿನದ ಅತಿಥಿ ಉಪನ್ಯಾಸಕರಾಗಿ ಅವರು ಮಾತನಾಡಿದರು. ಜಾತೀಯತೆ ಮತ್ತು ಮತಾಂಧತೆ ದೂರವಾದಾಗ ಮಾತ್ರ ರಾಷ್ಟ್ರೀಯ ಸದ್ಭಾವನೆ ಜಾಗೃತವಾಗಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದ ಪ್ರಾಚಾರ್ಯ ಎಸ್.ವಿ. ಸಂಕನೂರ ಮಾತನಾಡಿ, ಏಕತೆಯೇ ದೇಶದ ಅಖಂಡತೆಯನ್ನು ಕಾಪಾಡಬಲ್ಲ ಪ್ರಬಲ ಅಸ್ತ್ರವಾಗಿದೆ. ರಾಷ್ಟ್ರೀಯ ಸದ್ಭಾವನಾ ದಿನದಂದು ಮಾಡಿದ ಪ್ರತಿಜ್ಞೆಯ ಒಂದಂಶವನ್ನಾದರೂ ನಿಜಜೀವನದಲ್ಲಿ ಅಳವಡಿಸಿಕೊಂಡಾಗ ದಿನಾಚರಣೆ ಅರ್ಥಪೂರ್ಣವಾಗುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿದ್ದ ರಾಷ್ಟ್ರೀಯ ಸದ್ಭಾವನೆ ಇಂದಿನ ಯುವಜನಾಂಗದಲ್ಲಿ ಜಾಗೃತವಾಗಬೇಕಾದುದು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಪ್ರೊ. ಬಿ.ವಿ. ಕೊಟ್ಟೂರ, ಕೆ.ಎಸ್. ರಡ್ಡೇರ, ಪ್ರೊ. ಸುಸ್ಮಿತಾ ಹಾಗೂ ಕೆ.ಎಸ್. ಜಾಧವ ಉಪಸ್ಥಿತರಿದ್ದರು. ಮುರಳೀಧರ ಸಂಕನೂರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಬಿ.ಎಸ್. ಹಳ್ಳದ ವಂದಿಸಿದರು.