ಹರಿಶ್ಚಂದ್ರಕಾವ್ಯ ಜನಮಾನಸದ ಪ್ರತಿಬಿಂಬ
ಕನ್ನಡಪ್ರಭ ವಾರ್ತೆ, ಗದಗ, ಆ. 29
ಭಾವನೆಯ ಮಹೋನ್ನತಿ, ಭಾಷೆಯ ಬೀಸು, ಸಮೃದ್ಧವಾದ ದೇಸಿಯತೆಯ ಹೊಳಪು ತುಂಬಿದ ಉಭಯಕವಿ ಕಮಲರವಿ ಬಿರುದಾಂಕಿತ ಕವಿಯ ಶಕ್ತಿ ವಿಶೇಷಗಳನ್ನೆಲ್ಲ ಮೇಳೈಸಿಕೊಂಡ ಕೃತಿ ಹರಿಶ್ಚಂದ್ರಕಾವ್ಯವು ರಾಘವಾಂಕನ ಕಾವ್ಯಗಳ ಹೆಗ್ಗುರುತು. ಹರಿಶ್ಚಂದ್ರನ ಪಾತ್ರ ಸದಾಕಾಲ ಜನಮಾನಸದಲ್ಲಿ ಸತ್ಯದ ಹೆಸರಿನಲ್ಲಿ ಪ್ರತಿಬಿಂಬಿಸುತ್ತದೆ ಎಂದು ಗದುಗಿನ ಶಿಕ್ಷಕ ಶಿವಾನಂದ ಗಿಡ್ನಂದಿ ಹೇಳಿದರು.
ಅವರು ಈಚೆಗೆ ಗದಗ ಜಿಲ್ಲಾ ಕಸಾಪದ ವತಿಯಿಂದ ಜಿಲ್ಲಾ ಕಸಾಪ ಕಚೇರಿಯಲ್ಲಿ ನಡೆದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮಲ್ಲಿ ರಾಘವಾಂಕನ ಹರಿಶ್ಚಂದ್ರಕಾವ್ಯ ಕುರಿತು ಉಪನ್ಯಾಸ ನೀಡಿದರು. 14 ಸ್ಥಲಗಳಲ್ಲಿ ವಿಸ್ತಾರಗೊಂಡ ನಡುಗನ್ನಡದ ಷಟ್ಪದಿಯಲ್ಲಿ ರಚಿತವಾದ ಶ್ರೇಷ್ಠ ಕೃತಿ. ಹರಿಶ್ಚಂದ್ರನ ಕಥೆ ಅತ್ಯಂತ ಪ್ರಾಚೀನ ಹಿಂದಿನ ಸಂಸ್ಕೃತ ಸಾಹಿತ್ಯದಲ್ಲಿದ್ದರೂ ಅದಕ್ಕೆ ಹೊಸ ರೂಪ ನೀಡಿ ಸಹೃದಯರ ಮನಸೂರೆಗೊಳ್ಳುವಂತೆ, ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಹರಿಶ್ಚಂದ್ರ ಕಾವ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಪಾತ್ರ ಚಿತ್ರಣ, ರಸ, ಶೈಲಿ, ವಸ್ತುವಿನ್ಯಾಸ, ಕಥಾ ನಿರೂಪಣೆ ವಿಧಾನ, ವರ್ಣನೆ ಮೊದಲಾದವುಗಳನ್ನು ಸಮರ್ಥವಾಗಿ ಬಳಸಿಕೊಂಡು ಕೃತಿಗೆ ಮಹೋನ್ನತಿಯನ್ನು ತಂದುಕೊಟ್ಟ ರಾಘವಾಂಕ ಸಾಹಿತ್ಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುತ್ತಾನೆ ಎಂದರು. ಅಧ್ಯಕ್ಷತೆವಹಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ತಿರುಳ್ಗನ್ನಡ ನಾಡಿನಲ್ಲಿ ಹುಟ್ಟಿದ ಮೊಟ್ಟ ಮೊದಲ ಷಟ್ಪದಿ ಕೃತಿ ಹರಿಶ್ಚಂದ್ರಕಾವ್ಯ. ಈ ಕಾವ್ಯದಲ್ಲಿ ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರ ಎಂಬ ವಿಚಾರಧಾರೆಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾನೆ ಎಂದರು. ವಿಜಯ ಕಿರೇಸೂರ ಕವನಗಳನ್ನು ವಾಚಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಸಂಗಮೇಶ ತಮ್ಮನಗೌಡ್ರ, ಪ್ರೊ. ಕೆ.ಎಚ್. ಬೇಲೂರ, ಕೆ.ವಿ. ಕನ್ನೂರ, ಬಿ.ಎಸ್. ಹಿಂಡಿ, ಎಂ.ಪಿ. ರಮೇಶ, ಪ್ರೊ. ತಾರಾ ಬಿ.ಎನ್, ಪ್ರೊ. ಸಿ.ಜಿ. ಹುಡೇದಗಡ್ಡಿ, ಡಿ.ಎಸ್. ತಳವಾರ, ಪ್ರೊ. ಶಕುಂತಲಾ ಸಿಂಧೂರ, ಪ್ರೊ. ದತ್ತಪ್ರಸನ್ನ ಪಾಟೀಲ, ಚಿಕ್ಕಮಠ, ಮಂಜುನಾಥ ಜೋಬಾಳೆ, ರಮೇಶ ಸಜ್ಜಗಾರ, ಶಶಿಕಾಂತ ಕೊರ್ಲಹಳ್ಳಿ, ಅಶೋಕ ಸಾವಂತ, ಎಸ್.ಎ. ಹವಳದ, ಪ್ರಕಾಶ ಗಿಡ್ಡಣ್ಣವರ, ಎಸ್.ಎಫ್. ಹಡಪದ, ಮಲ್ಲಿಕಾರ್ಜುನ ಪೂಜಾರ, ಮಹಾಂತೇಶ ಮದ್ನೂರ, ಎಸ್.ಬಿ. ಗಾಣಿಗೇರ, ಆರ್.ಬಿ. ಹಡಪದ, ಜಯಶ್ರೀ ಶ್ರೀಗಿರಿ ಮುಂತಾದವರು ಉಪಸ್ಥಿತರಿದ್ದರು. ಕೆ.ಕೆ. ಹೂಗಾರ ಸ್ವಾಗತಿಸಿದರು. ಡಿ.ಎಚ್. ಮಲ್ಲೇಶ ನಿರೂಪಿಸಿದರು. ವಿಶ್ವನಾಥ ಕಮ್ಮಾರ ವಂದಿಸಿದರು.