ಕ್ರೀಡಾಪಟುಗಳು ಪ್ರಯತ್ನಶೀಲರಾಗಿ
ಕನ್ನಡಪ್ರಭ ವಾರ್ತೆ, ಗದಗ, ಆ. 30
ಕ್ರಿಡಾಪಟುವಿಗೆ ಸೋಲು ಅಂತಿಮವಲ್ಲ, ಆದ್ದರಿಂದ ಕ್ರೀಡಾಪಟುಗಳು ಸದಾ ಪ್ರಯತ್ನಶೀಲರಾಗಿ ಸಾಧನೆಯನ್ನು ಮಾಡುತ್ತಿರಬೇಕು. ಆಟವನ್ನು ಪ್ರೀತಿಯಿಂದ ಅನುಭವಿಸಿ ಆಡಿದಾಗ ಮಾತ್ರ ಗೆಲುವೆಂಬ ಯಶಸ್ಸು ಸಿಗಲು ಸಾಧ್ಯ ಎಂದು ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಹೇಳಿದರು.
ಅವರು ಈಚೆಗೆ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಗದಗ ಕ್ರೀಡಾ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿ ಇರುವ ಜಿಲ್ಲೆ. ಎಲ್ಲರ ಸಹಾಯ ಸಹಕಾರದಿಂದ ಇನ್ನಷ್ಟು ಕ್ರಿಡಾ ಪ್ರತಿಭೆಗಳು ಬೆಳಕಿಗೆ ಬರಲಿ. ನಮಗೆಲ್ಲರಿಗೂ ಹಾಕಿ ಮಾಂತ್ರಿಕ ಧ್ಯಾನಚಂದ ಸದಾ ಪ್ರಾತಃಸ್ಮರಣೀಯರಾಗಿದ್ದಾರೆ. ಅವರಂತೆ ಮಿಲ್ಕಾ ಸಿಂಗ್, ರಾಜು ಬಾಗಡೆ ಮುಂತಾದವರು ನಮಗೆ ಆದರ್ಶರಾಗಿದ್ದಾರೆ ಎಂದರು.
ಉಳವೇಶ ಅಂಗಡಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಾಧನೆ ಮಾಡಲೇಬೇಕು. ಅದು ಯಾವುದೇ ಕ್ಷೇತ್ರವಿರಲಿ ಸಾಧಿಸುವ ಛಲ ಮತ್ತು ಆತ್ಮ ವಿಶ್ವಾಸವಿರಬೇಕು. ಶ್ರದ್ಧೆ ಪ್ರಾಮಾಣಿಕತೆಗಳು ಮಾತ್ರ ಸಾಧನಗಳು. ಪ್ರತಿ ಕ್ರೀಡೆಯಲ್ಲಿಯೂ ತಂತ್ರಗಳನ್ನು ಬಳಸಿ ಆಡಬೇಕಾಗುವುದು. ಗೆಲವೊಂದೇ ಗುರಿ ಆಗದೆ ಕ್ರೀಡಾ ಪ್ರೇಮದಿಂದ ಆಟ ಆಡಬೇಕು. ಜೀವನದ ಎಲ್ಲ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಉಮೇಶ ಬಾರಕೇರ ಮಾತನಾಡಿ, ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ನಮ್ಮ ಮಹಾವಿದ್ಯಾಲಯ ಎಲ್ಲ ರೀತಿಯ ಸಹಕಾರ ನೀಡುತ್ತದೆ. ವಿದ್ಯಾರ್ಥಿಗಳು ಅಭ್ಯಾಸದ ಜತೆಗೆ ಕ್ರೀಡೆ ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಗದುಗಿನ ಪ್ರೇಮಾ ಹುಚ್ಟಣ್ಣವರ ಗ್ರಾಮೀಣ ಪ್ರದೇಶದಲಿಯೇ ಇದ್ದುಕೊಂಡು ಗದುಗಿನ ಕೀರ್ತಿಯನ್ನು ವಿಶ್ವಕ್ಕೆ ಬೆಳಗಿದ್ದಾರೆ ಎಂದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಉಪನ್ಯಾಸಕ ಪ್ರೊ. ಶಶಿಕಾಂತ ಕೊರ್ಲಹಳ್ಳಿ ಸ್ವಾಗತಿಸಿದರು. ರೇಣುಕಾ ಜಡಿ ನಿರೂಪಿಸಿದರು. ಪ್ರೊ. ಈ.ಎಫ್. ಕಾಯಕದ ವಂದಿಸಿದರು.