ಯುವಕರಿಂದ ಸಿಡಿ ಉತ್ಸವ
ಕನ್ನಡಪ್ರಭ ವಾರ್ತೆ, ರೋಣ, ಆ. 30
ಕೈಯಲ್ಲಿ ಚೌಡಕಿ, ತುಂತಿನಿ ತಾಳ ಹಿಡಿದು ಉತ್ತರ ಕರ್ನಾಟಕದ ಗಂಡು ಧ್ವನಿಯಲ್ಲಿ ಜೋಗತಿಯ ಹಾಡಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಕುಣಿದು, ವಿವಿಧ ರೀತಿಯ ಕಸರತ್ತು ಪ್ರದರ್ಶಿಸುತ್ತ, ಕಣ್ಮನ ಸೆಳೆಯುವಂತೆ ತಾಲೂಕಿನ ಇಟಗಿ ಗ್ರಾಮದಲ್ಲಿ ಶುಕ್ರವಾರ ಸಿಡಿ ಉತ್ಸವ ಜರುಗಿತು.
ಆಧುನಿಕತೆಯಿಂದ ಇಂದು ಮೂಲ ಜಾನಪದ ಕಲೆ ಕಾಣಸಿಗುವುದು ವಿರಳ. ಆದರೆ, ಜೋಗತಿ ನೃತ್ಯವನ್ನು ಸಿಡಿಯಾಡುವುದರ ಮೂಲಕ ಪ್ರತಿ ಮೂರು ವರ್ಷಕ್ಕೊಮ್ಮೆ ಇಟಗಿ ಗ್ರಾಮದ ಮೇಲಿನ ಓಣಿಯ ಯುವಕರು ಮಾಡುತ್ತ ಬಂದಿದ್ದಾರೆ. ಭೀಮಾಂಬಿಕಾದೇವಿ ನೆಲೆಸಿದ ಇಟಗಿ ಗ್ರಾಮದಲ್ಲಿ ಜರುಗಿದ ಸಿಡಿಯಾಟವನ್ನು ಗದಗ, ಬಿಜಾಪುರ, ರಾಯಚೂರ, ಧಾರವಾಡ, ಗುಲ್ಬರ್ಗಾ, ಬಾಗಲಕೋಟ ಮುಂತಾದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಜನತೆ ಜೋಗತಿ ನೃತ್ಯ ವೀಕ್ಷಿಸಿದರು. ಗ್ರಾಮದ ಧರ್ಮರಮಠದಿಂದ ಪ್ರಾರಂಭವಾದ ಸಿಡಿಯಾಟವು ಅನ್ನದಾನೇಶ್ವರ ದೇವಸ್ಥಾನ ಆವರಣ, ಮುಖ್ಯ ರಸ್ತೆ, ಗ್ರಾಪಂ ಆವರಣ, ಭೀಮಾಂಬಿಕಾದೇವಿ ದೇವಸ್ಥಾನ ಆವರಣದಲ್ಲಿ ಸಿಡಿಯಾಟ ಪ್ರದರ್ಶನಗೊಂಡಿತು.
ಯುವಕರಿಂದ ಜೋಗತಿ ನೃತ್ಯ: ಪಂಜಿನ ಜೋಗಪ್ಪ, ಪಡಲಗಿ ಜೋಗಿನ, ಚೌಡಕಿ ಜೋಗಪ್ಪ ಸೇರಿದಂತೆ 30ಕ್ಕೂ ಹೆಚ್ಚು ಯುವಕರು ಜೋಗತಿ ವೇಷ ತೊಟ್ಟು ಸಿಡಿಯಾಟವಾಡಿದರು. ಯಲ್ಲಮ್ಮನ ಪ್ರತಿರೂಪವಾದ ಜೋಗತಿಯನ್ನ ಇಲ್ಲಿ ಅನುಕರಿಸಲಾಗುತ್ತದೆ. ಕಾಲಲ್ಲಿ ದೊಡ್ಡ ಗೆಜ್ಜೆ, ಕೈಯಲ್ಲಿ ಹಸಿರು, ಬಂಗಾರದ ಬಳೆ, ಕೊರಳಲ್ಲಿ ಜೋಗತಿ ಸರ, ಕಿವಿಯಲ್ಲಿ ಬೆಂಡೋಲೆ, ಮೂಗಿನಲ್ಲಿ ಮುತ್ತಿನ ಹರಳುಳ್ಳ ಮೂಗುತಿ, ಕೊರಳಲ್ಲಿ ಬಂಡಾರದ ಚೀಲ, ಹಸಿರು ಸೀರೆ, ಬಿಳಿ ಕುಪ್ಪುಸ ತೊಟ್ಟು, ತಲೆ ಮೇಲೆ ಸಿಂಬೆಯ ಸಹಾಯವಿಲ್ಲದೇ ನೀರು ತುಂಬಿದ ತಾಮ್ರದ ಕೊಡ ಹೊತ್ತಿರುತ್ತಾರೆ. ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತ ವಿವಿಧ ರೀತಿಯ ಕಸರತ್ತು ಪ್ರದರ್ಶಿಸುತ್ತಾರೆ.
3 ವರ್ಷಕ್ಕೊಮ್ಮೆ ಆಚರಣೆ: ಕಠಿಣ ಪರಿಶ್ರಮ ಮತ್ತು ಕಸರತ್ತಿನಿಂದ ಕೂಡಿದ ಸಿಡಿಯಾಟವು ಕಲಾ ನೈಪುಣ್ಯತೆಯನ್ನೊಳಗೊಂಡಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸುವ ಈ ಸಿಡಿಯಾಟವನ್ನು ಶ್ರಾವಣ ಮಾಸದ ಕೊನೆಯ ಶುಕ್ರವಾರ ಆಚರಿಸಲಾಗುತ್ತದೆ. ಅಂದು ಬರಗಾಲ ಬಿದ್ದು ಜನರ ಸಂಕಷ್ಟವನ್ನು ದೂರ ಮಾಡಲು ಭೀಮಾಂಬಿಕಾದೇವಿಯಲ್ಲಿ ಪ್ರಾರ್ಥಿಸಿದಾಗ, ಸಿಡಿ ಆಡಿದರೆ ಸಂಕಷ್ಟಗಳು ಸಿಡಿದು ಹೋಗಿ ಸಮೃದ್ಧಿ ಮಳೆ, ಬೆಳೆಯಾಗುವದು ಎಂದು ಸಲಹೆ ನೀಡಿದಳಂತೆ. ಅಂದಿನಿಂದ ಇಂದಿನವರೆಗೂ ಸುಮಾರು 8-10 ದಶಕಗಳಿಂದ ಈ ಸಿಡಿಯಾಟವನ್ನು ಆಚರಿಸುತ್ತಾ ಬಂದಿದ್ದಾರೆ.
ಸಿಡಿಯಾಟದ ಕಸರತ್ತು: ತಲೆಮೇಲೆ ಕೊಡ ಹೊತ್ತ ಜೋಗತಿ ವೇಷಧಾರಿ ಯುವಕರು ಚೌಡಕಿ, ತುಂತನಿ ತಾಳ ಹಾಗೂ ಹಾಡಿಗೆ ತಕ್ಕಂತೆ ಕುಣಿಯತ್ತಾರೆ. ತಲೆ ಮೇಲಿನ ಕೊಡವನ್ನು ಕೈಯಿಂದ ಮುಟ್ಟದೆ ಬುಜದ ಮೇಲೆ, ಬೆನ್ನಿನ ಮೇಲೆ ತಂದು ಮತ್ತೆ ತಲೆಯ ಮೇಲೆ ಒಯ್ಯುತ್ತಾರೆ.
ಬೆನ್ನು ಮೇಲೆ ಕೊಡ ಇಟ್ಟು ಹೊಟ್ಟಿಯ ಸಹಾಯದಿಂದ ನಡೆಯುತ್ತಾರೆ. ಕೊಡದ ಮೇಲೆ ಶಾವಿಗೆ ಮಣೆಯಿಟ್ಟು ಅದರ ಮೇಲೆ ಕೊಡ ಹೊತ್ತು ಕುಳಿತು ತಿರುಗುತ್ತಾರೆ. ಹಲ್ಲಿನಿಂದ ಕೊಡ ಎತ್ತುವುದು, ಬುಜದ ಮೇಲಿಟ್ಟು ನಂತರ ತಲೆ ಮೇಲಿಟ್ಟುಕೊಳ್ಳುವುದು. ಸರ್ರನೆ ತಿರುಗುವುದು, ನೆಗೆಯುವುದು, ಒಂದೆ ಕಾಲಲ್ಲಿ ನಿಲ್ಲುವುದು, ನಡೆಯುವುದು, ನೆಲೆದ ಮೇಲಿಟ್ಟ ನೋಟನ್ನು ಹಣೆ ಅಥವಾ ಬಾಯಿಂದ ತೆಗೆದುಕೊಳ್ಳುವುದು. ದೀಡ್ ನಮಸ್ಕಾರ ಹಾಕುವುದು ಹೀಗೆ ಅನೇಕ ರೀತಿಯ ಸಾಹಸಗಳಿಂದ ಸಿಡಿಯಾಟ ವಿಶೇಷತೆಯಿಂದ ಕೂಡಿತ್ತು. ಜೋಗತಿ ಹೊತ್ತ ಯುವಕನೊಬ್ಬ ನೀರು ತುಂಬಿದ 5 ತಾಮ್ರದ ಕೊಡವನ್ನು ಹೊತ್ತು ತಾಳಕ್ಕೆ ತಕ್ಕಂತೆ ನೃತ್ಯ ಮಾಡಿ ಜನ ಮೆಚ್ಚುಗೆ ಪಡೆದ. ತಲೆಯ ಮೇಲೆ, ಬಾಯಲ್ಲಿ, ತೋಳ ಬಗಲಲ್ಲಿ ಕೊಡವನ್ನು ಹೊತ್ತು ತಾಳಕ್ಕೆ ತಕ್ಕಂತೆ ಕುಣಿದು ಜನರನ್ನು ರಂಜಿಸಿದ.
ಪಿ.ಎಸ್. ಪಾಟೀಲ