ಯೋಗದಿಂದ ಮನಸ್ಸು ಹತೋಟಿ: ಶ್ರೀ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಆ. 30
ಯೋಗ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಒಂದು ಕ್ರಿಯೆಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಜ. ಅನ್ನದಾನ ಶ್ರೀಗಳು ಹೇಳಿದರು.
ಅವರು ಶುಕ್ರವಾರ ಪಟ್ಟಣದ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಒಂದು ದಿನದ ಸಂವಹನ ಮತ್ತು ಸ್ವಯಂ ಸಂವಹನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಚಿನ ಕಾಲದಿಂದಲೂ ಸಮ್ಮೋಹನ ವಿದ್ಯೆ ಬೆಳೆದು ಬಂದಿದೆ. ಯೋಗ ಬಹುದೊಡ್ಡ ಪರಂಪರೆ. ಇದು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಕ್ರಿಯೆ. ಸಂವಹನ ಮತ್ತು ಯೋಗಕ್ಕೆ ಮನಸ್ಸು ಪ್ರಮುಖ ಕಾರಣ. ವಿಜ್ಞಾನ ಅಭಿವೃದ್ಧಿಗೊಳ್ಳುವುದಕ್ಕಿಂತ 900 ವರ್ಷಗಳ ಹಿಂದೆಯೇ ಅಕ್ಕಮಹಾದೇವಿ ತಮ್ಮ ವಚನಗಳಲ್ಲಿ ಮನುಷ್ಯನ ಮನಸ್ಸಿನ ಬಗೆಗೆ ಭಿತ್ತರಿಸುತ್ತಿರುವುದು ಅವಿಸ್ಮರಣೀಯ. ಮನುಷ್ಯನ ಸರ್ವ ಸುಖ ದುಃಖಕ್ಕೂ ಮನಸ್ಸೇ ಕಾರಣ. ಹೀಗಾಗಿ ಯೋಗಿಗಳೆಲ್ಲ ತಮ್ಮ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಂಡು ಜ್ಞಾನ, ಜಪ ಮಾಡಿ ಸಿದ್ಧಿ ಪಡೆದಿರುತ್ತಿದ್ದರು ಹೀಗಾಗಿ ಅವರು ಮಹಾತ್ಮರಾದರು. ಮನೋ ನಿಗ್ರಹದಿಂದ ಏನೆಲ್ಲಾ ಸಾಧ್ಯ ಎಂಬುವುದನ್ನು ಅರಿಯಬಹುದು. ಇದಕ್ಕೆ ಯೋಗ ಮತ್ತು ಸಂವಹನದಂತ ಕ್ರಿಯೆಗಳಿಂದ ಮಾತ್ರ ಸಾಧ್ಯ ಎಂದರು.
ಕೊಪ್ಪರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ರವೀಂದ್ರ ಕೊಪ್ಪರ ಮಾತನಾಡಿ, ಮನುಷ್ಯನಲ್ಲಿರುವ ಸುಪ್ತ ಮನಸ್ಸನ್ನು ಹೊರಹಾಕಲು ಇರುವ ಏಕೈಕ ಸಾಧನವೇ ಸಂವಹನ. ಇದು ಪ್ರತಿಯೊಬ್ಬರ ಮನಸ್ಸಿನಲ್ಲಿ ಹುದುಗಿರುವ ಸಾವಿರಾರು ಗುಪ್ತ ವಿಚಾರಗಳನ್ನು ಹೊರಹಾಕಲು ಸಹಾಯಕಾರಿಯಾಗಿದೆ ಎಂದರು. ಅಧ್ಯಕ್ಷತೆವಹಿಸಿದ್ದ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್‌ಮನ್ ಡಾ. ಕೆ.ಬಿ. ಧನ್ನೂರ ಹಾಗೂ ಅತಿಥಿಗಳಾಗಿ ಆಗಮಿಸಿದ್ದ ಯೋಗತಜ್ಞ ಹೊಂಬಾಳಿ ಮಾತನಾಡಿದರು.
ಡಾ. ಮಹೇಶ ನಾಲವಾಡ, ಡಾ. ಸತೀಶ ಹೊಂಬಾಳಿ, ಪ್ರೊ. ಸರಳಾಬಾಯಿ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಎ.ಕೆ. ನಾಶಿ, ಪ್ರೊ. ಸರ್ವಮಂಗಳಾ ನಾಶಿ, ಎಲ್.ಸಿ. ಹಿರೇಮಠ, ರವೀಂದ್ರನಾಥ ದೊಡ್ಡಮೇಟಿ, ಎಸ್.ಎಸ್. ಕಂಠಿ, ಸಿ.ಜಿ. ಹುಡೇದಗಡ್ಡಿ, ಎಸ್.ವಿ. ಸಂಕನೂರ, ಬಿ.ಡಿ. ಕರಡಣ್ಣವರ ಮುಂತಾದವರು ಉಪಸ್ಥಿತರಿದ್ದರು. ಪ್ರಾಚಾರ್ಯ ಅರವಿಂದ ಸಜ್ಜನ ಸ್ವಾಗತಿಸಿದರು. ಪ್ರೊ. ಎಸ್.ಜಿ. ಕೇಶಣ್ಣವರ ನಿರೂಪಿಸಿದರು. ಎಸ್.ಎಚ್. ಕುಲಕರ್ಣಿ ವಂದಿಸಿದರು.