ಹಡಪದ ಅಪ್ಪಣ್ಣ ಜಯಂತಿ
ರೋಣ: ಜಗಜ್ಯೋತಿ ಬಸವಣ್ಣನವರ ಸಮಕಾಲಿನವರಾದ ಶಿವಶರಣ ಹಡಪದ ಅಪ್ಪಣ್ಣನವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ ಎಂದು ನಿಜಸುಖಿ ವಿ.ವಿ. ಸಂಘದ ಕಾರ್ಯದರ್ಶಿ ಎಸ್.ಬಿ. ಅಣ್ಣಿಗೇರಿ ಹೇಳಿದರು. ಅವರು ಈಚೆಗೆ ಪಟ್ಟಣದ ಗುಲಗಂಜಿಮಠದಲ್ಲಿ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಹಾಗೂ ನಿಜಸುಖಿ ವಿವಿದೋದ್ಧೇಶ ಸಹಕಾರಿ ಸಂಘದ 2ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ವಿವಿದೋದ್ಧೇಶವನ್ನು ಒಳಗೊಂಡ ಸಹಕಾರಿ ಸಂಘಗಳ ಬೆಳವಣಿಗೆಗೆ ಸಮುದಾಯಗಳ ಶ್ರಮ, ಸಹಕಾರ, ಸಲಹೆ ಅತ್ಯಂತ ಮುಖ್ಯ. ಹಡಪದ ಸಮಾಜವು ಸಣ್ಣ ಸಮಾಜವಾಗಿದ್ದು, ಇದರ ಬೆಳವಣಿಗೆಗೆ ಎಲ್ಲರೂ ತಮ್ಮ ತನು, ಮನ, ಧನವನ್ನು ಸಮರ್ಪಣಾ ಭಾವನೆಯಿಂದ ಮತ್ತು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು. ಮುಧೋಳದ ವಾಸಂತಿ ಮುತಗೂರ ಹಾಗೂ ಅನ್ನಪೂರ್ಣಾ ಮನ್ನಾಪುರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಹಡಪದ ಅಪ್ಪಣ್ಣ ದೇವಸ್ಥಾನ ನಿರ್ಮಿಸಲು ಭೂಮಿ ನೀಡಿದ ಡಾ. ಎ.ಸಿ. ಹೂಲಿ ಅವರನ್ನು ಸನ್ಮಾನಿಸಲಾಯಿತು. ಸಾನ್ನಿಧ್ಯವನ್ನು ಗುಲಗಂಜಿಮಠದ ಗುರುಪಾದ ಸ್ವಾಮೀಜಿ, ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ವಹಿಸಿದ್ದರು. ಡಾ ಎ.ಸಿ. ಹೂಲಿ, ಮಲ್ಲಣ್ಣ ಹಡಪದ, ವೀರಣ್ಣ ಶಿರೋಳ, ಟಿ.ವೈ. ಹಡಪದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ಹಡಪದ ಸ್ವಾಗತಿಸಿದರು. ಸಂಗಪ್ಪ ಹಡಪದ ನಿರೂಪಿಸಿದರು. ಬಸವರಾಜ ಯಲಬುರ್ಗಿ ವಂದಿಸಿದರು.