ಭಕ್ತರ ಆರಾಧ್ಯದೈವ ಶ್ರೀ ಮೌನೇಶ್ವರ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 31
ವರವಿ ಶ್ರೀ ಮೌನೇಶ್ವರ ಮಠದಲ್ಲಿ ಸೆ. 2ರ ಸಂಜೆ 5ಗಂಟೆಗೆ ವಿಜೃಂಭಣೆಯಿಂದ ರಥೋತ್ಸವ ನಡೆಯಲಿದೆ.
ಸೆ. 3ರ ಸಂಜೆ 4 ಗಂಟೆಗೆ ಕಡುಬಿನ ಕಾಳಗ, ಸೆ. 4 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ಪಲ್ಲಕ್ಕಿ ಛಬ್ಬಿ ಗ್ರಾಮಕ್ಕೆ ಹೋಗಿ ಬರುವುದು. ಮಧ್ಯಾಹ್ನ 2 ಗಂಟೆಗೆ ಮಠದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಮೌನೇಶ್ವರ ಲೀಲಾ ವಿಲಾಸ ಪ್ರವಚನ ನಡೆಯಲಿದೆ. ರಥೋತ್ಸವದ ನಂತರ ಬೆಳ್ಳಿ ಪಲ್ಲಕ್ಕಿ ಹಾಗೂ ಗರ್ಭಗುಡಿಯ ದ್ವಾರದ ಬಂಗಾರದ ಕವಚ ದೇವಸ್ಥಾನಕ್ಕೆ ಸಮರ್ಪಿಸಲಾಗುವುದು.
ಯದಾ ಯದಾ ಹೀ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಎಂಬ ವಾಣಿಯಂತೆ ಧರ್ಮ ಸಂಸ್ಕೃತಿಯು ಅಧಃಪತನಕ್ಕಿಳಿಯದಂತೆ ಕಾಪಾಡಲೆಂದು ಇಲ್ಲಿ ಋಷಿ, ಮುನಿ, ಪುಂಗವರು, ಸಂತರು, ಮಹಾಂತರು, ಶರಣರು, ಯೋಗಿಗಳು, ದಾಸರೇವಣ್ಯರು ಈ ಭರತ ಭೂಮಿಯಲ್ಲಿ ಹುಟ್ಟಿ ಬೆಳೆದರು. ಆದರೆ, ಮೌನೇಶ್ವರರು ಎಲ್ಲರಂತೆ ತಾಯಿ ಗರ್ಭದಲ್ಲಿ ಹುಟ್ಟಿ ಬರಲಿಲ್ಲ. ಭಕ್ತರ ಮನೋಕಾಮನೆಯನ್ನು ಈಡೇರಿಸಲೆಂದು ಪರಮೇಶ್ವರನೇ ಮಗುವಿನ ರೂಪ ಧಾರಣ ಮಾಡಿಸಿಕೊಂಡು ಮಾತೆಯ ಮಡಿಲಲ್ಲಿ ಮೂಡಿನಿಂತ ಮಹಾನ್ ವ್ಯಕ್ತಿ ಮೌನೇಶ್ವರ ಎಂಬ ನಂಬಿಕೆ ಭಕ್ತರದ್ದಾಗಿದೆ.
ಮುಗ್ಧ ಸಾದ್ವಿಯ ದೈವಭಕ್ತಿ ನಿಶ್ಚಿತ ಬಂಜೆತನದಿಂದ ಮುಕ್ತ ಮಾಡುವ ಅಂಥಃಕರುಣೆಯು ಸಾಕ್ಷಾತ್ಕಾರವಾದ ವಿಶಿಷ್ಟ ಜನನ ಅವರದ್ದು. ಆದರೂ ಸಹಜ ಮಾನವರಂತೆ ಬೆಳೆದು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ತೋರಿಸಿ ಭಕ್ತರ ಆಕರ್ಷಿಸಿಕೊಂಡು ಜ್ಞಾನೋಪದೇಶಗೈದ ಸ್ಥಳಗಳಲ್ಲಿ ಶಿರಹಟ್ಟಿ ತಾಲೂಕಿನ ಪವಿತ್ರ ವರವಿ ಕ್ಷೇತ್ರವೂ ಒಂದು. ಅಖಂಡ ಭಾರತವನ್ನು ಸುತ್ತಾಡಿದ ಮೌನೇಶ್ವರರು ಅನೇಕ ಪವಾಡಗಳಿಂದ ಪ್ರಸಿದ್ಧರಾಗಿದ್ದಾರೆ.
ಸಹಸ್ರಾರು ಭಕ್ತರು: ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಹಿಂದೂಸ್ಥಾನದಲ್ಲಿಯೂ ಅದ್ಭುತ ಪವಾಡಗಳಿಂದ ಶಿಷ್ಯ ಭಕ್ತಕೋಟಿಯನ್ನು ನಿರ್ಮಿಸಿಕೊಂಡ ನಿತ್ಯ ನಿರ್ಮಲ ಪರಂಜ್ಯೋತಿ ಸ್ವರೂಪವೇ ಮೌನೇಶ್ವರರು. ಅವರು ಬಿಜಾಪುರದಿಂದ ಶಿರಹಟ್ಟಿಯ ಫಕೀರೇಶ್ವರ ಮಠಕ್ಕೆ ಬಂದು ಚನ್ನವೀರಸ್ವಾಮಿಯನ್ನು ಫಕೀರೇಶ್ವರರೆಂದು ಮಠಕ್ಕೆ ಅರ್ಪಿಸಿ ನಂತರ ಶಿಷ್ಯ ಪರಿವಾರದೊಂದಿಗೆ ಹೊರಟು ಸಮೀಪದ ವರವಿ ಗ್ರಾಮದ ಹೊರವಲಯದಲ್ಲಿ ಸಾಗುತ್ತಿದ್ದಾಗ ನುಣುಪಾದ ತುಂಡು ಶಿಲೆಗೆ ಪಾದ ತಗುಲಿತು. ಇದೇನು ಸ್ವಾಮಿಗಳೇ ಮೈಮನ ತುಂಬ ಕಣ್ಣುಗಳನ್ನು ಹೊತ್ತ ನೀವು ಈ ಶಿಲೆಯನ್ನು ಎಡವಬಹುದೇ ಎಂದು ಪ್ರಶ್ನಿಸಿದಾಗ, ಆಗ ಮೌನೇಶ್ವರರು ನಾನು ಎಡವಿದ್ದು ಶಿಲೆಯಲ್ಲ. ಅದು ಉದ್ಭವ ಲಿಂಗವಾಗಿದೆ. ನಾನು ಈ ಲಿಂಗದಲ್ಲಿ ಸ್ಥಿರವಾಗಿ ನೆಲೆಸಿ ಭಕ್ತರ ಮನೋಭಿಲಾಷೆಯನ್ನು ಪೂರೈಸುವೆ. ಮುಂದೊಂದು ದಿನ ಈ ಗ್ರಾಮ ಪುಣ್ಯ ಕ್ಷೇತ್ರವಾಗಿ ಮೆರೆಯುವುದು ಎಂದು ನುಡಿದರಂತೆ. ಅದೇ ದಿನ ರಾತ್ರಿ ಮೊಬಾಪುರದ ಬಾದಷಾಹನ ಸ್ವಪ್ನದಲ್ಲಿ ಕಾಣಿಸಿಕೊಂಡು ದೇವಾಲಯ ಕಟ್ಟಿಸುವಂತೆ ಅಪ್ಪಣೆ ಮಾಡಿದರು. ಕೂಡಲೇ ಬಾದಷಾಹ ಗುರುವಿನ ಆಜ್ಞಯಂತೆ ಕುಶಲ ಕಲಾ ಕಾರ್ಮಿಕರನ್ನು ಕಳುಹಿಸಿ ಕಟ್ಟಡ ನಿರ್ಮಿಸಲು ಆದೇಶ ಮಾಡಿದರಂತೆ. ದೇವಾಲಯ ಪೂರ್ಣಗೊಂಡ ಬಳಿಕ ಮೌನೇಶ್ವರರ ಆಜ್ಞೆ ಪಡೆದು ದೇವಾಲಯದ ಉದ್ಘಾಟನೆಗೆ ಆಗಮಿಸಿ ಆಶೀರ್ವಾದ ಪಡೆದುಕೊಂಡು ಮರಳಿದನು ಎಂದು ಹೇಳಲಾಗುತ್ತಿದೆ. ಮೌನೇಶ್ವರರು ಲಿಂಗಕ್ಕೆ ಎಡವಿದ್ದು ಶ್ರಾವಣ ಮಾಸದ ಕೊನೆಯ ಸೋಮವಾರವಾದ್ದರಿಂದ ಆ ದಿನವನ್ನು ಜಾತ್ರೆಯ ದಿನವನ್ನಾಗಿ ಆಚರಿಸುವರು. ವಿಜೃಂಭಣೆಯಿಂದ ಈ ಜಾತ್ರೆಗೆ ನಾಡಿನ ಎಲ್ಲ ಭಾಗದಿಂದ ಭಕ್ತಜನ ಬಂದು ಗುರುವಿನ ಆಶೀರ್ವಾದ ಪಡೆಯುವರು.