ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಡಲೆಗೆ ಕೀಟ ಕಾಟ

Vishwanath S
Updated On : 2 Dec 2013, 11:58 am

ಕನ್ನಡಪ್ರಭ ವಾರ್ತೆ, ನರೇಗಲ್ಲ, ಡಿ. 1
ಈ ಭಾಗದ ಜನತೆಯ ಮುಖ್ಯ ಕಸಬು ಕೃಷಿ. ಸಂಪೂರ್ಣ ಓಣಬೇಸಾಯ ಅವಲಂಬಿಸಿರುವ ಈ ಭಾಗದ ಜನತೆ ಮಳೆಯನ್ನೇ ಆಶ್ರಯಿಸಿದ್ದಾರೆ. 2-3 ವರ್ಷದಿಂದ ಸರಿಯಾಗಿ ಮಳೆಯಾಗದೆ ತೊಂದರೆಯಲ್ಲಿದ್ದ ರೈತನಿಗೆ ಈ ಬಾರಿ ಉತ್ತಮ ಮಳೆಯಾಗಿದ್ದು, ಬೆಳೆ ಚನ್ನಾಗಿ ಬೆಳೆಯುವ ಸಮಯದಲ್ಲಿ ಕೀಟಗಳ ಬಾಧೆ ಪ್ರಾರಂಭವಾಗಿದ್ದು, ರೈತನಿಗೆ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆ ತಪ್ಪುತ್ತಿಲ್ಲ.
ಸಾಲಸೋಲ ಮಾಡಿ ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಿಂದ ಕಡಲೆ ಬಿತ್ತಿದ ರೈತರಿಗೆ ಈಗ ಕಡಲೆಗೆ ಕೀಟ ಬಾಧೆ ಕಾಣಿಸಿಕೊಂಡಿರುವುದು ಇಳುವರಿ ಕುಂಠಿತಗೊಳ್ಳುವ ಭಯ ಕಾಡ ತೊಡಗಿದೆ.
ಸರಿಯಾದ ಮಾಹಿತಿ ಪಡೆಯಿರಿ: ರೈತರು ಬಿತ್ತನೆ ಮಾಡಲು ಬೀಜ, ಗೊಬ್ಬರಗಳನ್ನು ಮಾತ್ರ ಕೃಷಿ ಕೇಂದ್ರದಿಂದ ತಂದರೆ ಸಾಲದು, ಅದಕ್ಕೆ ಬೇಕಾದ ಸಮಗ್ರ ಮಾಹಿತಿಯನ್ನು ಕೃಷಿ ಇಲಾಖೆಯವರಿಂದ ಪಡೆಯಬೇಕು. ಕೀಟಬಾಧೆ ಸಿಡಿರೋಗ ಮುಂತಾದವುಗಳು ಬಂದೊದಗಿದಾಗ ಅವರನ್ನು ಹೊಲಗಳಿಗೆ ಕರೆದುಕೊಂಡು ಹೋಗಿ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಅಂದಾಗ ಮಾತ್ರ ರೋಗಗಳನ್ನು ತಡೆಗಟ್ಟಲು ಸಾಧ್ಯ. ಇದರಿಂದ ಉತ್ತಮ ಬೆಳೆ ಬೆಳೆಯಲು ಅನುಕೂಲ. ಆದರೆ ರೈತ ಯಾವುದೇ ತೊಂದರೆಯಾದರೂ ತನ್ನಷ್ಟಕ್ಕೆ ತಾನೇ ವಿಚಾರ ಮಾಡಿ, ಬೇರೆ ರೈತರನ್ನು ಕೇಳಿ ಇದರ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಾನೆ. ಆದರೆ ಇಲ್ಲಿ ರೈತ ತಾತ್ಕಾಲಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾನೆಯೇ ಹೊರತು ಶಾಶ್ವತ ಪರಿಹಾರವಲ್ಲ. ಇದಕ್ಕೆಂದೇ ಕೃಷಿ ಅಧಿಕಾರಿಗಳಿದ್ದಾಗ ಅವರ ಸದುಪಯೋಗ ಪಡೆದುಕೊಳ್ಳಲು ಮುಂದಾಗುವುದಿಲ್ಲ.
ಬಿತ್ತನೆ ಪ್ರಮಾಣ: ಪ್ರಸಕ್ತ ವರ್ಷ ನರೇಗಲ್ಲ ಹಾಗೂ ಹೋಬಳಿ ಗ್ರಾಮದಲ್ಲಿ ಒಟ್ಟಾರೆ 11 ಗ್ರಾಮ ಪಂಚಾಯಿತಿ ಒಳಗೊಂಡಂತೆ 18,250 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆ ಬಿತ್ತನೆಯಾಗಿದ್ದು, ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ 90 ದಿನದ ಪೈರಾಗಿದ್ದು, ರೈತ ಎಕರೆ ಹೊಲಕ್ಕೆ 25 ಕೆಜಿಯಂತೆ ಕಡಲೆ ಬೀಜ ಬಿತ್ತಲು, ಗೊಬ್ಬರ ಕೆಲಸಗಾರರ ಕೂಲಿ ಸೇರಿದಂತೆ ರು. 2800-4200 ವರೆಗೆ ಖರ್ಚು ಮಾಡಿದ್ದಾರೆ. ಕಡಲೆ ಬೆಳೆ ಉತ್ತಮವಾಗಿ ಬಾರದಿದ್ದಲ್ಲಿ ನಷ್ಟ ಎದುರಿಸುವ ಆತಂಕ ರೈತರಲ್ಲಿ ಶುರುವಾಗಿದೆ.
 ಕೀಟ ನಿಯಂತ್ರಣಕ್ಕೆ ಕ್ರಮ
ಕಡಲೆ ಬೀಜವನ್ನು ಬಿತ್ತಿದ 15 ರಿಂದ 20 ದಿನದಲ್ಲಿ ಪ್ರೋಸೋನಾಪಾಸ್ ಎಣ್ಣೆಯನ್ನು ಪ್ರತಿ ಲೀಟರ್ ನೀರಿಗೆ 2 ಎಂಎಲ್ ಬೆರೆಸಿ ಮೊದಲನೇ ಸಿಂಪಡಣೆ ಮಾಡಬೇಕು. 2ನೇ ಸಿಂಪಡಣೆ 30 ರಿಂದ 35 ದಿನದಲ್ಲಿ ಪ್ರತಿ ಲೀಟರ್ ನೀರಿಗೆ ಲ್ಯಾಮ್‌ಡಾಸಿಲೋಥ್ರಿನ್ ಎಣ್ಣೆಯನ್ನು 1 ಎಂಎಲ್ ಹಾಗೂ 1ಗ್ರಾಂ ಎಸಿಪೇಟ್ ಬೆರೆಸಿ ಸಿಂಪಡಿಸಬೇಕು. ಹಾಗೇ 45 ರಿಂದ 50 ದಿನದಲ್ಲಿ ಇಮಾಮ್ ಯ್ಯಾಕ್ಟಿಂಗ್ ಬೆಂಜೋವೆಟ್‌ನ್ನು ಪ್ರತಿ ಲೀ. ನೀರಿಗೆ 3 ಗ್ರಾಂ ಬೆರೆಸಿ ಸಿಂಪಡಿಸಬೇಕು. ಕೊನೆಯ ಸ್ಫ್ರೇಯನ್ನು 60 ರಿಂದ 70 ದಿನದಲ್ಲಿ ಸ್ಪೈನೋಸೈಡ್ ಪ್ರತಿ ಲೀ. ನೀರಿಗೆ 0.3 ಎಂಎಲ್ ಸಿಂಪಡಿಸಬೇಕು. ಕೀಟ ಕಡಲೆಯನ್ನು ಎಲ್ಲ ಬೆಳೆಗಿಂತ ಹೆಚ್ಚು ಆವರಿಸುವುದರಿಂದ ಹೂ ಅರಳುವಾಗ ಶೇ. 2 ರಷ್ಟು ಯೂರಿಯಾ ಸಿಂಪಡಿಸಬೇಕು. ಹಸಿ ಹೆಚ್ಚಾದಾಗ, ಬೀಜೋಪಚಾರ ಮಾಡದೇ ಇದ್ದಾಗ ಕಡಲೆಗೆ ಸಿಡಿರೋಗ ಕಂಡುಬರುತ್ತದೆ. ಇದನ್ನು ನಿಯಂತ್ರಿಸಲು 25 ಕೆಜಿ ಬೀಜಕ್ಕೆ 100 ಗ್ರಾಂ (ಟ್ರೈಕೋಡರ್ಮ್) ಕರಾಟೆ ಸಿಂಪಡಿಸಬೇಕು. ಪ್ರತಿ ಎಕರೆಗೆ 250 ಎಂಎಲ್‌ನಂತೆ ಎಣ್ಣಿಯನ್ನು ಸಿಂಪಡಿಸಬೇಕು. ಅಂದಾಗ ಸಿಡಿರೋಗ ನಿಯಂತ್ರಣಗೊಳಿಸಬಹುದು.
ಈ ಹಿಂದೆ ಸರಿಯಾಗಿ ಮಳಿ ಆಗಿದ್ದಿಲ್ಲ. ಈಗ ಮಳೆರಾಯ ಕಣ್ತೆರೆದಾನ. ಬೆಳಿ ಚನ್ನಾಗಿ ಬಂದೈತಿ ಆದ್ರ ಕೀಟ ಹೆಚ್ಚಾಗಿ ನಿಯಂತ್ರಣಕ್ಕ ಒದ್ದಾಡಾಕತ್ತೀವಿ, ಒಂದಿಲ್ಲಾ ಒಂದ ಕಾಟ ಐತೆ..ಐತ್ರಿ..
 ವಿರೂಪಾಕ್ಷಪ್ಪ ಬಾರಕೇರ, ರಂಗಪ್ಪ ನಾಯ್ಕರ
ಕಡಲೆ ಬೆಳೆ ಬೆಳೆದ ರೈತರು
ರೈತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೃಷಿ ಕೇಂದ್ರವಿದೆ. ಅವರಿಗೆ ನಾವು ಬೀಜ ಖರೀದಿಗೆ ಬಂದಾಗ ಬೀಜೋಪಚಾರಕ್ಕಾಗಿ ಟ್ರೈಕೋಡರ್ಮಾ, ರೈಜೋಬಿಯಂ ತಗೊಳ್ಳಿ ಇದರಿಂದ ಶೇ. 50 ಸಾರಜನಕ ಒದಗಿಸಬಹುದು. ಯೂರಿಯಾ ಗೊಬ್ಬರ ಹಾಕುವುದನ್ನು ಕಡಿಮೆಮಾಡಬಹುದೆಂದು ಹೇಳಿದರೂ ರೈತರು ಕೇಳುವುದಿಲ್ಲ. ಕೆಲವರು ಮಾತ್ರ ಮಾಡುತ್ತಾರೆ. ನನ್ನ 1 ವರ್ಷದ ಅವಧಿಯಲ್ಲಿ 20 ರಿಂದ 25 ಹೊಲಗಳಿಗೆ ಹೋಗಿ ಪರಿಹಾರೋಪಾಯ ನೀಡಿದ್ದೇವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈತರು ಮುಂದಾಗಬೇಕು.
- ಪ್ರಕಾಶ ಚವಡಿ
ಸ್ಥಳೀಯ ಕೃಷಿ ಅಧಿಕಾರಿ



-ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement