ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭಿಕ್ಷಾಟನೆಯಲ್ಲಿ ಮಕ್ಕಳನ್ನು ತೊಡಗಿಸಿದರೆ ಶಿಸ್ತು ಕ್ರಮ: ಡಿಸಿ

Vishwanath S
Updated On : 2 Dec 2013, 11:59 am

 ಗದಗ: ಕೆಲವು ಭಿಕ್ಷುಕರು ಅವರ ಮಕ್ಕಳನ್ನು ನಿತ್ಯ ಬಿಕ್ಷಾಟಣೆಯಲ್ಲಿ ತೊಡಗಿಸುತ್ತಿದ್ದು, ಇದರಿಂದಾಗಿ ನಗರದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಭಿಕ್ಷಾಟನೆಗೆ ಮಕ್ಕಳನ್ನು ತೊಡಗಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.  ಅವರು ಈಚೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 2 ದಿನಗಳ ಕಾಲ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಾತನಾಡಿದರು.ಬಸ್‌ಸ್ಟ್ಯಾಂಡ್, ರೈಲು ನಿಲ್ದಾಣ, ಮಾರ್ಕೆಟ್ ಮತ್ತು ಸಾಯಿಮಂದಿದ ಆವರಣದ ಸುತ್ತ-ಮುತ್ತ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳು, ಬಾಲಕಾರ್ಮಿಕ ಮಕ್ಕಳು ಮತ್ತು ರಕ್ಷಣೆ ಹಾಗೂ ಪೋಷಣೆ ಅವಶ್ಯವಿರುವ ಮಕ್ಕಳನ್ನು ವಶಕ್ಕೆ ತೆಗೆದುಕೊಂಡು ಮಕ್ಕಳ ಕಲ್ಯಾಣ ಸಮಿತಿ ಎದುರಿಗೆ ಹಾಜರುಪಡಿಸಲಾಯಿತು. ನಂತರ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹಾಗೂ ಎಸ್ಪಿ ಡಾ. ಶರಣಪ್ಪ ಎಸ್.ಡಿ. ಸಮ್ಮುಖದಲ್ಲಿ ಭಿಕ್ಷಾಟನೆಗೆ ತೊಡಗಿದ್ದ ಮಕ್ಕಳ ಪಾಲಕರನ್ನು ಹಾಗೂ ಸಂಬಂಧಿಸಿದ ಓಣಿಯ ಮುಖಂಡರನ್ನು ಕರೆಯಿಸಿ ವಿಚಾರಣೆ ನಡೆಸಿ, ಬಿಕ್ಷಾಟನೆಗೆ ತೊಡಗಿಕೊಳ್ಳದಂತೆ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲಾಯಿತು. ಸರ್ಕಾರದ ಯೋಜನೆಗಳ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಬಗ್ಗೆ ತಿಳಿಸಲಾಯಿತು. ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸುವುದು, ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡುವುದು ಕಾನೂನು ರೀತಿ ಅಪರಾಧವಾಗಿರುತ್ತದೆ. ಆದ್ದರಿಂದ ಇಂತಹ ಕೃತ್ಯಗಳಲ್ಲಿ ತೊಡಗಿದವರನ್ನು ಹಾಗೂ ತೊಡಗಿಸಿದವರನ್ನು ಶಿಕ್ಷಿಸಲಾಗುತ್ತದೆ. ಇಂತಹ ಬಡ ಮಕ್ಕಳಿಗಾಗಿ ಸರ್ಕಾರದಿಂದ ಪ್ರಾಯೋಜಕತ್ವ, ಬಾಲಮಂದಿರದಲ್ಲಿ ಪುನರ್ವಸತಿ ಯೋಜನೆಗಳಿದ್ದು ಇವುಗಳನ್ನು ಪಡೆದುಕೊಂಡು ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸುವಂತೆ ಪಾಲಕರಿಗೆ ತಿಳಿಹೇಳಿ, ಇನ್ನು ಮುಂದೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಮಕ್ಕಳನ್ನು ಪಾಲಕರ ವಶಕ್ಕೆ ಒಪ್ಪಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement