ಮೂಗು ಮುಚ್ಚಿಕೊಂಡು ಬನ್ನಿ ಮುಂಡರಗಿ ಬಸ್ ನಿಲ್ದಾಣಕ್ಕೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 1
ಇತ್ತೀಚಿನ ದಿನಗಳಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದೆ ಅವ್ಯವಸ್ಥೆ ಮಿತಿ ಮೀರುತ್ತಿದೆ.
ಆವರಣದೊಳಗೆ ಕಾಲಿಟ್ಟರೆ ಸಾಕು, ಅಲ್ಲಿನ ಕೊಳಕು ತುಂಬಿರುವ ಚರಂಡಿ, ಕಸ, ಸ್ವಚ್ಛತೆ ಕೊರತೆಯಿಂದಾಗಿ ಗಬ್ಬೆದ್ದು ನಾರುತ್ತಿದ್ದು, ಇದರಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ನಿತ್ಯ ಬಂದು ಹೋಗುವ ಪ್ರಯಾಣಿಕರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಸ್ ನಿಲ್ದಾಣದ ಆವರಣದಲ್ಲಿರುವ ಚಂರಡಿಯಲ್ಲಿ ಪ್ಲಾಸ್ಟಿಕ್, ಬಟ್ಟೆ, ಎಳೆನೀರು ಕುಡಿದು ಬೀಸಾಕಿದ ಕಾಯಿ, ಸಾರಾಯಿ ಬಾಟಲಿ ಸೇರಿದಂತೆ ಅನೇಕ ವಸ್ತುಗಳು ಬಿದ್ದು, ಗಲೀಜು ನೀರು ಹರಿದು ಹೋಗದಂತೆ ತಡೆದಿದೆ. ಇದರಿಂದ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಚರಂಡಿ ಅಷ್ಟೇ ಅಲ್ಲದೇ ಆವರಣದ ಪಕ್ಕದಲ್ಲಿಯೂ ಅಲ್ಲಲ್ಲಿ ನೀರು ನಿಂತು ಕೊಳಚೆ ನಾರುತ್ತಿದೆ. ಪುರಸಭೆಯವರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಇತ್ತ ಗಮನಹರಿಸದಿರುವುದ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ಗಲೀಜಿನಿಂದ ಕೂಡಿದ ಬಸ್: ಪ್ರತಿದಿನ ಬೆಳಗ್ಗೆ ಡಿಪೋದಿಂದ ಬರುವ ಬಸ್ಗಲ್ಲಿಯೂ ಅಸ್ವಚ್ಛತೆ ಎದ್ದು ಕಾಣುತ್ತದೆ. ಸೀಟುಗಳ ಮೇಲೆ ಸಾಕಷ್ಟು ಧೂಳು ಬಿದ್ದಿರುತ್ತದೆ. ಆದರೆ, ಡಿಪೋದಲ್ಲಿ ಕೆಲಸ ಮಾಡುವವರು ಮಾತ್ರ ಇದು ತಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಹಾಗೇ ಬಸ್ನ್ನು ನಿಲ್ದಾಣಕ್ಕೆ ಬಿಡುತ್ತಾರೆ. ಪ್ರಯಾಣಿಕರು ಬಸ್ ಹತ್ತಿದಾಗ ಧೂಳು ತುಂಬಿದ ಸೀಟುಗಳ ಮೇಲೆ ಕುಳಿತು ತಮ್ಮ ಬಟ್ಟೆಗಳನ್ನೆಲ್ಲ ಗಲೀಜು ಮಾಡಿಕೊಂಡು ಹೋಗುವಂತಾಗಿದೆ. ಅಸ್ವಚ್ಛತೆ ಕುರಿತು ಅನೇಕ ಬಾರಿ ಸಾರ್ವಜನಿಕರು ದೂರು ನೀಡಿದರೂ ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಪ್ರಯಾಣಿಕರ ಆರೋಪವಾಗಿದೆ.
ರಾಜಹಂಸ ಬಸ್ಗಳಿಲ್ಲ: ಈ ಹಿಂದೆ ಮುಂಡರಗಿ ಘಟಕದಿಂದ 2 ರಾಜಹಂಸ ಬಸ್ಗಳಿದ್ದವು. ಒಂದು ಮುಂಡರಗಿಯಿಂದ ಬೆಂಗಳೂರಿಗೆ, ಮತ್ತೊಂದು ಬೆಂಗಳೂರಿನಿಂದ ಮುಂಡರಗಿಗೆ ನಿತ್ಯ ಸಂಚರಿಸುತ್ತಿದ್ದವು. ಆದರೆ ಈಗ 2 ವರ್ಷಗಳಿಂದ ಅವುಗಳನ್ನು ಸ್ಥಗಿತಗೊಳಿಸಿದ್ದು, ಇದರಿಂದಾಗಿ ತಮ್ಮ ಕೆಲಸಕ್ಕಾಗಿ, ವ್ಯಾಪಾರ, ವಹಿವಾಟಿಗಾಗಿ ನಿತ್ಯ ಬೆಂಗಳೂರಿಗೆ ಸಂಚರಿಸುವ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗಿದೆ. ರಾಜಹಂಸ ಬಸ್ ಸಂಚರಿಸುವುದರಿಂದ ಅಲ್ಲಿಂದ ಪಾರ್ಸಲ್ಗಳನ್ನು ಕಳುಹಿಸುವವರಿಗೆ ಹಾಗೂ ಬಂದು ಹೋಗುವವರಿಗೆ ಅನುಕೂಲವಾಗುತ್ತಿತ್ತು. ಆದ್ದರಿಂದ ಸಂಬಂಧಪಟ್ಟವರು ಈ ಕೂಡಲೇ ರಾಜಹಂಸ ಬಸ್ಗಳನ್ನು ಪ್ರಾರಂಭಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಸ್ಗಳು: ಮುಂಡರಗಿ ಘಟಕದಲ್ಲಿ ಅನೇಕ ಹಳೆಯದಾಗಿರುವ ಬಸ್ಗಳಿದ್ದು, ಅವುಗಳನ್ನೇ ಇನ್ನೂ ಓಡಿಸಲಾಗುತ್ತಿದೆ. ಇದರಿಂದಾಗಿ ಅನೇಕ ಬಸ್ಗಳು ಪ್ರತಿದಿನ ಒಂದಿಲ್ಲೊಂದು ಕಡೆ ಕೆಟ್ಟು ನಿಂತಿರುತ್ತವೆ. ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಮುಂಡರಗಿ ಘಟಕದ ಕೆಲವು ಬಸ್ಗಳಿಗೆ ರಾತ್ರಿ ಸಮಯದಲ್ಲಿ ಹೆಡ್ಲೈಟ್ಗಳೇ ಹತ್ತುವುದಿಲ್ಲ. ಆದ್ದರಿಂದ ಬೆಳಗ್ಗೆ ಬಸ್ಗಳು ಘಟಕದಿಂದ ಹೊರಬಿಡುವಾಗ ಅವುಗಳನ್ನು ಪರಿಶೀಲಿಸಿ ಹೊರಗೆ ಬಿಡುವುದು ಅವಶ್ಯ. ಇಲ್ಲದಿದ್ದರೆ ಉತ್ತಮವಾಗಿ ಕಾರ್ಯನಿರ್ವಹಿಸುವ ಚಾಲಕ, ನಿರ್ವಾಹಕರೂ ಸಾರ್ವಜನಿಕರ ಕೋಪಕ್ಕೆ ಗುರಿಯಾಗುತ್ತಾರೆ. ಆದ್ದರಿಂದ ಘಟಕ ವ್ಯವಸ್ಥಾಪಕರು ಇತ್ತಕಡೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಸಂಜೆ 8 ಗಂಟೆಯ ನಂತರ ಗದಗದಿಂದ ಮುಂಡರಗಿಗೆ ಬರಲು ಸಮರ್ಪಕ ಬಸ್ಗಳು ಇರದೇ ಇರುವುದರಿಂದ ಅನೇಕ ಬಾರಿ 2-3 ಬಸ್ನಲ್ಲಿ ಪ್ರಯಾಣಿಸುವಷ್ಟು ಜನರು ಒಂದೇ ಬಸ್ನಲ್ಲಿ ನೂಕುನುಗ್ಗಲಿನಲ್ಲಿಯೇ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಹಾಗೂ ವೃದ್ಧರು ಸಂಜೆ ವೇಳೆಯಲ್ಲಿ ಪ್ರಯಾಣ ಮಾಡಲು ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ಸಂಜೆ 8-30ಕ್ಕೆ, 9 ಗಂಟೆಗೆ, 9-30ಕ್ಕೆ ಹೀಗೆ 8 ಗಂಟೆಯ ನಂತರ 3-4 ಬಸ್ಗಳನ್ನು ಬಿಡಬೇಕು.
- ಮೌನೇಶ ಬಡಿಗೇರ
ತಾಲೂಕಿನ ಬೂದಿಹಾಳ ಗ್ರಾಮದ ಯುವಕ
-ಶರಣು ಸೊಲಗಿ