ಕಾರ್ಮಿಕರು ಸಮಾಜಕ್ಕೆ ಉತ್ತಮ ಸೇವೆ ನೀಡಿ
ಕನ್ನಡಪ್ರಭ ವಾರ್ತೆ, ಗದಗ, ಡಿ. 2
ಕಾರ್ಮಿಕರು ಸಂಘಟನೆಯಾಗುವ ಮೂಲಕ ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು ಎಂದು ಎಸ್.ಆರ್. ಇನ್ಪೋಟೆಕ್ನ ಸಿಇಒ ಸಚಿನ್ ಪಾಟೀಲ ಹೇಳಿದರು.
ಅವರು ಭಾನುವಾರ ನಗರದ ಡಿಸಿ ಮಿಲ್ ಕಾಂಪೌಂಡ್ದಲ್ಲಿರುವ ಗದಗ-ಬೆಟಗೇರಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಕಾರ್ಯಾಲಯದ ಆವರಣದಲ್ಲಿ ಗದಗ-ಬೆಟಗೇರಿ ಕಾರ್ಪೇಂಟರ್ ಸಂಘದಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಮಿಕರ ಪ್ರತಿನಿಧಿಯಾಗಿ ಆಯ್ಕೆಗೊಂಡ ಎಂ.ಐ. ನವಲೂರ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕಟ್ಟಡ ನಿರ್ಮಾಣ ಮಾಡುವಲ್ಲಿ ಕಾರ್ಮಿಕರ ಪಾತ್ರ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಆದರ್ಶ ಸಮಾಜ ನಿರ್ಮಾಣ ಮಾಡುವಲ್ಲಿಯೂ ಇದೆ. ಕಾರ್ಮಿಕರು ಸಂಘಟಿಕರಾಗುವುದು ಅತ್ಯವಶ್ಯಕ.
ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದರು. ಸನ್ಮಾನ ಸ್ವೀಕರಿಸಿದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರ ಪರ ಪ್ರತಿನಿಧಿ ಎಂ.ಐ. ನವಲೂರ ಮಾತನಾಡಿ, ಕಾರ್ಮಿಕರು ಪ್ರೀತಿ ಮತ್ತು ಗೌರವದಿಂದ ನೀಡಿದ ಈ ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುವುದರ ಜತೆಗೆ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಮಾಡುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗದಗ-ಬೆಟಗೇರಿ ಕಾರ್ಪೇಂಟರ್ ಸಂಘದ ಕಾರ್ಯದರ್ಶಿ ಜುನೇದ ಉಮಚಗಿ ಹಾಗೂ ಎಂ.ಎಂ. ಯತ್ನಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ-ಬೆಟಗೇರಿ ಕಾರ್ಪೇಂಟರ್ ಸಂಘದ ಅಧ್ಯಕ್ಷರಾದ ಭೀಮಪ್ಪ ಪೂಜಾರ ಹಾಗೂ ಉಪಾಧ್ಯಕ್ಷ ಅಲಿಅಹ್ಮದ ಕೊಪ್ಪಳ, ಗದಗ-ಬೆಟಗೇರಿ ಬಾರ್ಬೆಂಡಿಂಗ್ ಸಂಘದ ಅಧ್ಯಕ್ಷ ಜಂದಿಸಾಬ್ ಢಾಲಾಯತ್, ಗದಗ-ಬೆಟಗೇರಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಉಪಾಧ್ಯಕ್ಷ ಯಸುಜಾನ್ ಶೌರಿ, ಅಲ್ಲಾಭಕ್ಷ ದೊಡ್ಡಮನಿ, ಸಿದ್ಧಪ್ಪ ಕಾತರಕಿ, ಜಾಫರ್ ಮಜ್ಜಗಿ, ಜಾಕೀರಹುಸೇನ ಬಳ್ಳಾರಿ, ರಾಜೇಸಾಬ್ ಕಣಗಿನಹಾಳ, ಸಲೀಂಸಾಬ್ ಬಳ್ಳಾರಿ, ಮೈನುದ್ದೀನ್ ಬೆಟಗೇರಿ, ನಜೀರಸಾಬ್ ಮಾನ್ವಿ, ದಾವಲಸಾಬ ಗತ್ತರಗಿ ಮುಂತಾದವರು ಉಪಸ್ಥಿತರಿದ್ದರು. ಸಂಘದ ಸಹ ಖಜಾಂಚಿ ಯೂಸೂಫ್ ಕೊಟ್ಟೂರ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಮಹ್ಮದಶರೀಫ ಯಾದಗಿರಿ ನಿರೂಪಿಸಿದರು. ಖಜಾಂಚಿ ಗೌಸ್ಮೊಹದ್ದೀನ್ ಬಳ್ಳಾರಿ ವಂದಿಸಿದರು.