ತುಂಬಿದ ಕೆರೆಗಳು: ಅಂತರ್ಜಲ ಹೆಚ್ಚಳ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 2
ಸತತ ಬರದ ಬವಣೆಗೆ ಸಿಲುಕಿ ನೀರಿಲ್ಲದೇ ಭಣಗುಡುತ್ತಿದ್ದ ಪಟ್ಟಣ ಸಮೀಪದ ಜಿಗೇರಿ, ಬೆಣಸಮಟ್ಟಿ, ನಾಗರಸಕೊಪ್ಪ, ಮಾಟರಂಗಿ ಹಾಗೂ ನಾಗೇಂದ್ರಗಡ ರೈತ ಕಾಯಕ ಕೆರೆಗಳು ಈಚೆಗೆ ಸುರಿದ ಮಳೆಯಿಂದಾಗಿ ಮತ್ತೆ ಮೈದುಂಬಿಕೊಂಡಿದ್ದು, ಪರಿಣಾಮ ಸುತ್ತಲೂ ಸ್ಥಗಿತಗೊಂಡಿದ್ದ ಕೊಳವೆಬಾವಿಗಳಲ್ಲೂ ನೀರು ಚಿಮ್ಮಿ ಹರ್ಷದ ಹೊನಲು ಹರಿದಿದೆ.
ಸುತ್ತಲಿನ ಪ್ರದೇಶದ ರೈತರ ಜಮೀನಿನಲ್ಲಿ ಕೊರೆಸಿದ ನೂರಾರು ಕೊಳವೆ ಬಾವಿಗಳಿಗೆ ಈ ಕೆರೆಗಳು ಸಂಜೀವಿನಿಯಾಗಿದ್ದವು. ಆದರೆ, ಪ್ರಕೃತಿ ಮುನಿಸಿನ ಪರಿಣಾಮ ಸತತ 3 ವರ್ಷ ಬರ ಆವರಿಸಿದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಕೆರೆಯ ಸುತ್ತಲಿನ ಬಹುತೇಕ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದ ಪರಿಣಾಮ ರೈತರಲ್ಲಿ ಆತಂಕ ಸೃಷ್ಟಿಯಾಯಿತು.
ಕೈಹಿಡಿದ ಹುಬ್ಬಾ ಮಳೆ: ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಆರಂಭಿಕ ಮಳೆಗಳು ಅಷ್ಟಕಷ್ಟೆ ಸುರಿದಿವೆ. ಮುಂದೇನು ಎನ್ನುವ ಸಂದರ್ಭದಲ್ಲಿ ಹುಬ್ಬಾ ಮಳೆ ನಿರಾಶೆಯಿಂದ ತಲೆ ಮೇಲೆ ಕೈಹೊತ್ತು ಆಕಾಶದತ್ತ ಮುಖ ಮಾಡಿದ್ದ ರೈತ ಸಮುದಾಯದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ. ಪರಿಣಾಮ ಬತ್ತಿ ಬರಿದಾಗಿದ್ದ ಕೊಳವೆಬಾವಿಗಳು ಮತ್ತೆ ಉಕ್ಕಿ ಹರಿಯಲಾರಂಭಿಸಿವೆ. ಅದರಲ್ಲೂ ವಿಶೇಷವಾಗಿ ಕೆರೆ ಸುತ್ತಲಿನ ಪ್ರದೇಶ ಬಳಿ ರೈತರು ಹೆಚ್ಚೆಚ್ಚು ಕೊಳವೆ ಬಾವಿಗಳು ಕೊರೆಸಿದ್ದಾರೆ. ಇದರಿಂದ ಕೆರೆ ನೀರಿಗಿಂತಲೂ ಕೊಳವೆ ಬಾವಿ ಮೂಲಕ ತಮ್ಮ ಜಮೀನಿನಲ್ಲಿ ನೀರಾವರಿ ಬೆಳೆ ಬೆಳೆಯುತ್ತಿರುವ ರೈತರ ಮೊಗದಲ್ಲಿ ಮಂದಹಾಸ ಬೀರಿದೆ.
ಜನ-ಜಾನುವಾರುಗಳ ಜೀವನಾಡಿ: 3 ವರ್ಷದಿಂದ ಕೆರೆಗಳು ಬರಿದಾಗಿದ್ದ ಪರಿಣಾಮ ಕುಡಿಯಲು ನೀರಿಲ್ಲದೆ ಜಾನುವಾರುಗಳ ಸ್ಥಿತಿ ಅಯೋವುಯವಾಗಿತ್ತು. ವರುಣನ ಕೃಪೆಯಿಂದಾಗಿ ಅಂತರ್ಜಲ ಮಟ್ಟದ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಪಟ್ಟಣ ಸೇರಿ ಸುತ್ತಲಿನ ಕಾಲಕಾಲೇಶ್ವರ, ದಿಂಡೂರ, ರಾಜೂರ, ಜಿಗೇರಿ, ವದೇಗೊಳ, ಗೋಗೇರಿ, ಕುಂಟೋಜಿ, ಬೆಣಸಮಟ್ಟಿ, ಮಾಟರಂಗಿ, ಲಕ್ಕಲಕಟ್ಟಿ, ಅಮರಗಟ್ಟಿ ಗ್ರಾಮದಲ್ಲಿನ ಮಳೆಯಾಶ್ರಿತ ರೈತರು ಕೊಳವೆ ಬಾವಿ ಆಶ್ರಿತ ರೈತರು ತಮ್ಮ ಜಮೀನಿನಲ್ಲಿ ಮತ್ತೆ ಕೊಳವೆಬಾವಿ ಕೊರೆಯಿಸಲು ಮುಂದಾಗಿದ್ದಾರೆ. ನಷ್ಟದಲ್ಲಿದ್ದ ರೈತರಿಗೆ ಈ ಬಾರಿ ಮಳೆ ನಿರೀಕ್ಷೆಗೆ ತಕ್ಕಂತೆ ಸುರಿದಿರುವುದು ಆಶಾಭಾವನೆ ಮೂಡಿಸಿದೆ. ಇನ್ನೊಂದೆಡೆ ಬರಿ ಒಣ ಬೇಸಾಯ ಮಾಡುತ್ತಿರುವ ರೈತರು ಸಹ ಈಗ ತಮ್ಮ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಲು ಮುಂದಾಗಿರುವುದು ರೈತ ಕಾಯಕ ಕೆರೆಗಳು ಜನರ ಜೀವನಾಡಿಯಾಗಿವೆ ಎಂಬುದು ರೈತ ಸಮುದಾಯದ ಅಭಿಮತ.
3-4 ವರ್ಷದಿಂದ ಗಜೇಂದ್ರಗಡ ಸುತ್ತಮೂತ್ತಲೂ ಸಮರ್ಪಕ ಮಳೆಯಾಗದೇ ಕುಡಿವ ನೀರಿಗೂ ಸಂಕಷ್ಟ ಎದುರಾಗಿತ್ತು. ಕೊಳವೆಬಾವಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಇಂತಹ ಸಂದರ್ಭದಲ್ಲಿ ಹುಬ್ಬ ಮಳೆಯು ಈ ಭಾಗದಲ್ಲಿ ಸಮರ್ಪಕವಾಗಿ ಸುರಿದಿರುವುದರಿಂದ ಕೆರೆಗಳೆಲ್ಲ ತುಂಬಿವೆ. ಬಂದಾದ ಕೊಳವೆಬಾವಿಗಳಲ್ಲಿ ನೀರು ಬರುತ್ತಿದ್ದು, ಇದರಿಂದ ನೂರಾರು ರೈತರಿಗೆ ಅನುಕೂಲವಾಗಿದೆ.
- ಮಲ್ಲಿಕಾರ್ಜುನ ಅವಾರಿ, ಮುತ್ತಣ್ಣ ಕೊಪ್ಪಳ,
ಗಜೇಂದ್ರಗಡದ ರೈತರು
-ವಿಶೇಷ ವರದಿ