ದೊಡ್ಡಾಟ ತರಬೇತಿ ಕೇಂದ್ರ ಸ್ಥಾಪನೆಗೆ ಚಿಂತನೆ
ಕನ್ನಡಪ್ರಭ ವಾರ್ತೆ, ಗದಗ, ಡಿ. 2
ಬೆಟಗೇರಿಯಲ್ಲಿ ದೊಡ್ಡಾಟ ತರಬೇತಿ ಕೇಂದ್ರ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಭಾನುವಾರ ಸಂಜೆ ಬೆಟಗೇರಿಯ ಅಶೋಕ ಬಣ್ಣದ ಅವರ ಮನೆಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಮಾರು ರು. 5 ಕೋಟಿ ವೆಚ್ಚದಲ್ಲಿ ಈ ಕೇಂದ್ರ ಸ್ಥಾಪಿಸಲು ನಾನು ಹಾಗೂ ಸಚಿವೆ ಉಮಾಶ್ರೀ ಸರ್ಕಾರದ ಮೇಲೆ ಒತ್ತಡ ತಂದು ಈ ಕಾರ್ಯ ಮಾಡುತ್ತೇವೆ ಎಂದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಯುವಪೀಳಿಗೆ ಈ ಕಲೆಯತ್ತ ಗಮನಹರಿಸಬೇಕು. ನಮ್ಮ ನಾಡು, ನುಡಿ ಸಂಸ್ಕೃತಿಯನ್ನು ಬೆಳೆಸಲು ಯುವಕರು ಮುಂದೆ ಬರಬೇಕು. ದೊಡ್ಡಾಟ ತರಬೇತಿ ಕೇಂದ್ರ, ಸಂಶೋಧನಾ ಕೇಂದ್ರ ಆದಷ್ಟು ಬೇಗನೆ ಬೆಟಗೇರಿಯಲ್ಲಿ ಸ್ಥಾಪನೆಗೊಳ್ಳಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾಮೇಳದ ಅಧ್ಯಕ್ಷ, ಅಶೋಕ ಬಣ್ಣದವರು, ನಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಈ ಕಲೆಯನ್ನು ಬೆಳೆಸಿಕೊಂಡು ಹೋಗಲು ಎಲ್ಲ ಕಲಾವಿದರ ಸಹಕಾರದಿಂದ ಸಾಧ್ಯವಾಗಿದೆ ಎಂದರು. ಗಣೇಶಸಿಂಗ್ ಬ್ಯಾಳಿ ಸ್ವಾಗತಿಸಿದರು. ದಶರಥ ಕೊಳ್ಳಿ ವಂದಿಸಿದರು. ರಾಜು ಮಾಳೊದೆ ನಿರೂಪಿಸಿದರು.