ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೂಲ ಸೌಲಭ್ಯವಿಲ್ಲದೆ ಬದುಕು ದುಸ್ತರ

Vishwanath S
Updated On : 3 Dec 2013, 11:00 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಡಿ. 2
ಬೆಳೆದ ಪ್ರದೇಶಗಳು ಬೆಳೆಯುತ್ತಲೇ ಸಾಗುತ್ತಿವೆ. ಹಿಂದುಳಿದ ಪ್ರದೇಶಗಳು ಹಿಂದುಳಿಯತ್ತಲೇ ಇವೆ. ಸರ್ಕಾರಗಳಿಂದ ಪಟ್ಟಣ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ಅಪಾರ ಪ್ರಮಾಣದ ಅನುದಾನ ಬಿಡುಗಡೆಗೊಂಡರೂ ಅವುಗಳು ಎಲ್ಲಿ ಅನುಷ್ಠಾನಗೊಳ್ಳುತ್ತವೆ ಎನ್ನುವುದೇ ತಿಳಿಯುತ್ತಿಲ್ಲ.
ಪಟ್ಟಣದ 2ನೇ ವಾರ್ಡಿನ ಕರೆಗೋರಿ ನಿವಾಸಿಗಳು ಯಾವುದೇ ರೀತಿಯ ಆಧುನಿಕ ಸೌಲಭ್ಯಗಳಿಲ್ಲದೆ ಮೂಲ ಸೌಲಭ್ಯದಿಂದ ವಂಚಿತರಾಗಿ ಇನ್ನೂ ಓಬೇರಾಯನ ಕಾಲದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.
ಸುಮಾರು 350 ಮನೆಗಳಿರುವ ಕರೆಗೋರಿ ಪ್ಲಾಟ್‌ನಲ್ಲಿ ಯಾವುದೇ ಮೂಲ ಸೌಲಭ್ಯ ಸಿಗದೇ ಇಲ್ಲಿನ ನಿವಾಸಿಗಳಿಗೆ ಅತ್ತ ಪಟ್ಟಣವೂ ಅಲ್ಲದೇ ಇತ್ತ ಗ್ರಾಮೀಣ ಪ್ರದೇಶವು ಅಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುವಂತಾಗಿದೆ.
ಇಲ್ಲಿನ ಸಾರ್ವಜನಿಕರಿಗೆ ಸಂಚರಿಸಲು ಯೋಗ್ಯ ರಸ್ತೆಗಳಿಲ್ಲ, ಕುಡಿಯಲು  ನೀರಿಲ್ಲ, ಚರಂಡಿಗಳು ನಿರ್ಮಾಣವಾಗಿಲ್ಲ. ದುರಂತವೆಂದರೆ ಮಕ್ಕಳು ಮತ್ತು ಮಹಿಳೆಯರು ಶೌಚಾಲಯಕ್ಕೆ ಹೋಗಲು ಪ್ಲಾಟ್‌ನ ಪಕ್ಕದಲ್ಲಿನ ಹೊಲಗಳು ಹಾಗೂ ರಸ್ತೆಯ ಬದಿ ಮುಳ್ಳು ಕಂಟಿಗಳನ್ನು ಆಶ್ರಯಿಸಬೇಕಾಗಿದೆ.  ಪ್ಲಾಟ್ ಪಟ್ಟಣದ ಹೊರವಲಯದಲ್ಲಿರುವುದರಿಂದ ಹಾವು ಚೇಳುಗಳ ಕಾಟ ವಿಪರೀತವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಅಭಿವೃದ್ಧಿಯಾಗದೇ ನಿರ್ಲಕ್ಷ್ಯ: ಸುಮಾರು 25 ವರ್ಷಗಳ ಹಿಂದೆ ಮಾಜಿ ಶಾಸಕ ಎಸ್.ಎನ್. ಪಾಟೀಲರ ಅವಧಿಯಲ್ಲಿ ಪಟ್ಟಣದ ಬಡ ನಿವಾಸಿಗಳಿಗೆ ಕರೆಗೋರಿಯಲ್ಲಿ ಪ್ಲಾಟ್‌ಗಳನ್ನು ನೀಡಲಾಗಿತ್ತು. ಆದರೆ ಇದುವರೆಗೂ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದು ಮಾತ್ರ ಶೋಚನೀಯವಾಗಿದೆ.
ಪಟ್ಟಣದ ಪುರಸಭೆಗೆ ಸಾಕಷ್ಟು ಅನುದಾನ ಹರಿದು ಬರುತ್ತಿದ್ದರೂ ಇದುವರೆಗೂ ಕರೆಗೋರಿಯ ಪ್ಲಾಟ್‌ಗೆ ಯಾವುದೇ ಹಣ ಬಿಡುಗಡೆಯಾಗಿಲ್ಲವೋ, ಅಥವಾ ಬಿಡುಗಡೆಯಾದ ಹಣದಿಂದ ಇಲ್ಲಿನ ಮೂಲ ಸೌಲಭ್ಯ ನಿವಾರಿಸಲು ಆಗುತ್ತಿಲ್ಲವೋ ಎನ್ನುವುದು ತಿಳಿಯುತ್ತಿಲ್ಲ.
ಕುಡಿಯುವ ನೀರಿಗೆ ಹಾಹಾಕಾರ: 8-10 ದಿನಗಳಿಗೊಮ್ಮೆ ತುಂಗಭದ್ರಾ ನದಿಯಿಂದ ಬರುವ ನೀರನ್ನು ಕುಡಿಯಬೇಕು. ಇಲ್ಲವಾದಲ್ಲಿ ಇಲ್ಲಿನ ನಿವಾಸಿಗಳು ಕೆಲಸವನ್ನೆಲ್ಲ ಬಿಟ್ಟು 2-3 ಕಿಮೀ ನಡೆದುಕೊಂಡು ಹೋಗಿ ನೀರು ತರಬೇಕಾಗಿದೆ. ಕರೆಗೋರಿಯಲ್ಲಿ ಪುರಸಭೆ   ಕುಡಿಯುವ ನೀರಿಗೆ ಕೊಳವೆ ಬಾವಿ ಕೊಯಿರೆಸಿದೆ. ಆ ಕೊಳವೆ ಬಾವಿಯಲ್ಲಿ ಕಡಿಮೆ ನೀರು ಇರುವುದರಿಂದ ನೀರು ಸಮರ್ಪಕವಾಗಿ ಜನತೆಗೆ ಸಿಗುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ತಪ್ಪುತ್ತಿಲ್ಲ.
ಸೂಕ್ತ ಶೌಚಾಲಯಗಳಿಲ್ಲ
ಇಲ್ಲಿನ ನಿವಾಸಿಗಳಿಗೆ ಪುರಸಭೆಯು ಯಾವುದೇ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿಲ್ಲ. ಇಲ್ಲಿನ ಮಹಿಳೆಯರು ಬಯಲು ಪ್ರದೇಶಗಳಿಗೆ, ಪ್ಲಾಟಿನ ಪಕ್ಕದ ಹೊಲಗಳಿಗೆ ಹೋಗುವುದರಿಂದ ಹೊಲದವರಿಂದ ಬೈಯಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಇಲ್ಲಿನ ಸಮಸ್ಯೆಗಳನ್ನು ಪರಹರಿಸಲು ಕ್ರಮಕೈಗೊಳ್ಳಬೇಕು.
- ಈರಪ್ಪ ಸಂಶಿ, ಫಕ್ಕಿರಗೌಡ ಬರಮಗೌಡರ, ಸಿದ್ಧಪ್ಪ ದುರಗಣ್ಣವರ, ದ್ಯಾಮನಗೌಡ ಅಳ್ಳೊಳ್ಳಿ, ಹುಸೇನಸಾಬ್ ಒಂಟಿ, ಉಮೇಶ ಶಿರಹಟ್ಟಿ, ಮಂಜಪ್ಪ ಶಿರಬಡಗಿ,
ಸ್ಥಳೀಯ ನಿವಾಸಿಗಳು
ಸೌಲಭ್ಯಗಳಿಂದ ವಂಚಿತ
ಕರೆಗೋರಿ ಪ್ಲಾಟ್ ನಿವಾಸಿಗಳು ಹಲವಾರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈಗಾಗಲೇ ಇಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯಬೇಕಾಗಿತ್ತು. ಯಾಕೋ ಇಲ್ಲಿನ ನಿವಾಸಿಗಳ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಯಾರೂ ಮಾಡದೇ ಇರುವುದು ನೋವಿನ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ನಾಗಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ, ಇಲ್ಲಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
- ನಾಗಪ್ಪ ಓಂಕಾರಿ
2ನೇ ವಾರ್ಡಿನ ಪುರಸಭೆಯ ಸದಸ್ಯ



-ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement