ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಮರಸ್ಯ ಮೂಡಿಸುವಲ್ಲಿ ಧಾರ್ಮಿಕ ಕಾರ್ಯ ಸಹಕಾರಿ

Vishwanath S
Updated On : 3 Dec 2013, 11:01 am

ಗದಗ: ಸಮುದಾಯದಲ್ಲಿ ಸಾಮರಸ್ಯ ಮೂಡಿಸುವಲ್ಲಿ  ಶ್ರದ್ಧಾಪೂರ್ವಕ ಧಾರ್ಮಿಕ ಕಾರ್ಯಗಳು ಸಹಕಾರಿಯಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಭಾನುವಾರ ರಾತ್ರಿ ಬೆಟಗೇರಿಯ ಟರ್ನಲ್ ಪೇಟೆಯ ಮಂಜುನಾಥ ಸ್ವಾಮಿ ದೇವಸ್ಥಾನದ 30ನೇ ವರ್ಷದ ಕಾರ್ತಿಕ ಮಾಸದ ದೀಪೋತ್ಸವದ ಅಂಗವಾಗಿ ಏರ್ಪಡಿಸಿದ್ದ ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ನಿರಂತರವಾಗಿ 30 ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಸಾರ್ವಜನಿಕ ಸಹಕಾರದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಆಚರಿಸುವ ಮೂಲಕ ಸಮಾಜದಲ್ಲಿ ಧಾರ್ಮಿಕ ಶ್ರದ್ಧೆ ಹಾಗೂ ಅಧ್ಯಾತ್ಮ ಚಿಂತನೆ ಬೆಳೆಸುವಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ಮತ್ತು ಸಂಗಡಿಗರ ಸಂಘಟಿತ ಪ್ರಯತ್ನ ಪ್ರಶಂಸನೀಯವಾಗಿದೆ ಎಂದರು.
ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ಮಾತನಾಡಿ, ದೈವಿ ಕಾರ್ಯಗಳಿಗೆ ಈ ಪರಿಸರದ ನಿವಾಸಿಗಳು ಸದಾ ಪ್ರೋತ್ಸಾಹ ನೀಡುವ ಮೂಲಕ ಬೆಟಗೇರಿ ಭಾಗದಲ್ಲಿ ಉತ್ತಮ ಅಧ್ಯಾತ್ಮ ಚಿಂತನೆ ಹಾಗೂ ಸಾಮರಸ್ಯ ಕಾಪಾಡಿಕೊಳ್ಳಲು ಸದಾ ಕೈಜೋಡಿಸಿದ್ದು, ದೇವಸ್ಥಾನ ಟ್ರಸ್ಟ್ ಸಮಿತಿಗೆ ಸೇರಿದ ಜಮೀನಿನಲ್ಲಿ ಸಮುದಾಯ ಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಆರ್ಥಿಕ ತೊಂದರೆಯ ಕಾರಣ ಕೆಲಸದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಕಾರಣ ಸಚಿವರು ತಮ್ಮ ಅನುದಾನದಲ್ಲಿ 10 ಲಕ್ಷ ರು. ನೀಡಿ ಸಮುದಾಯ ಭವನ ಪೂರ್ಣಗೊಳಿಸಲು ಸಹಕರಿಸುವಂತೆ ಕೋರಿದರು. ಸಮುದಾಯ ಭವನ ಪೂರ್ಣಗೊಳಿಸಲು ಬೇಕಾದ ಆರ್ಥಿಕ ಸಹಾಯ ನೀಡಲು ಒಪ್ಪಿಗೆ ನೀಡಿದ ಸಚಿವರು ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಸಭೆಯ ಮಾಜಿ ಅಧ್ಯಕ್ಷೆ ನಾಗರತ್ನಾ ಮುಳಗುಂದ, ನಗರಸಭೆ ಸದಸ್ಯ ಎಂ.ಎಚ್. ಮುಳಗುಂದ, ಶ್ರೀನಿವಾಸ ಕರಿ, ಮೇಘಾ ಮುದಗಲ್, ಕಮಲಾ ಹಾದಿಮನಿ, ಅನಿಲ ಸಿಂಗ್ಟಾಲಕೇರಿ, ಅಮರೇಶ ಚಾಗಿ, ವಿಜಯಕುಮಾರ ಕಬಾಡಿ, ಅನಿಲ ಗಡ್ಡಿ, ಬಿ.ವಿ. ರೋಣದ, ಬೂದಪ್ಪ ಹುಣಸೀಮರದ, ಲಕ್ಷ್ಮಣ ದೊಡ್ಡಮನಿ, ಚಿದಾನಂದ ಹೊಸಮನಿ, ರಾಜು ಹಾದಿಮನಿ, ಶಂಕರ ಮುಳಗುಂದ, ಉಮರಫಾರೂಖ ಹುಬ್ಬಳ್ಳಿ, ಬಸವರಾಜ ಹುಣಸೀಮರದ, ಚಂದ್ರು ಹುಣಸೀಮರದ, ಶ್ರೀಕಾಂತ ಚಳಗೇರಿ, ಶಿವು ಪೂಜಾರ ಉಪಸ್ಥಿತರಿದ್ದರು.
ನಂತರ ಮೂರ್ತಿ ಮೆರವಣಿಗೆ ಬೆಟಗೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement