ಇಸ್ಪೀಟ್ ಆಡುತ್ತಿದ್ದ 14 ಜನರ ಬಂಧನ
ಲಕ್ಷ್ಮೇಶ್ವರ: ಪಟ್ಟಣದ ಹೊರವಲಯದಲ್ಲಿನ ಗುಂಜಳ ರಸ್ತೆಯಲ್ಲಿನ ಸಾಲಾವಳಿ ಬಸವೇಶ್ವರ ದೇವಸ್ಥಾನದ ಹೊರ ಬಯಲಿನಲ್ಲಿ ಮಂಗಳವಾರ ಬೆಳಗಿನ ವೇಳೆ ಇಸ್ಪೀಟ್ ಆಡುತ್ತಿದ್ದ 14 ಜನರನ್ನು ಬಂಧಿಸಲಾಗಿದ್ದು, ಬಂಧಿತರಿಂದ ರು. 31,650 ಗಳು, ಒಂದು ಮಾರುತಿ ಓಮ್ನಿ ವಾಹನ ಹಾಗೂ ಹಿರೋ ಹೊಂಡಾ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ವಿಕಾಸ ಲಮಾಣಿ ತಿಳಿಸಿದರು. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಶೇಂಗಾ ಬಣವೆಗೆ ಬೆಂಕಿ: ಅಪಾರ ಹಾನಿ
ಲಕ್ಷ್ಮೇಶ್ವರ: ಪಟ್ಟಣದ ಹೊರವಲಯದ ದುಂಡಿ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿನ ಹೊಲದಲ್ಲಿದ್ದ ಶೇಂಗಾ ಬಣವೆಗೆ ಸೋಮವಾರ ರಾತ್ರಿ ಬೆಂಕಿ ಬಿದ್ದು, ಅಪಾರ ಮೌಲ್ಯದ ಶೇಂಗಾ ಬೆಳೆಯು ನಾಶವಾದ ಘಟನೆ ಜರುಗಿದೆ. ಪಟ್ಟಣದ ಹನುಮಂತಪ್ಪ ಯಲ್ಲಪ್ಪ ಹುರುಕನವರ ಅವರ ಸುಮಾರು 2 ಎಕರೆ ಹಾಗೂ ಲಕ್ಷ್ಮಣ ಮಣಿಕಪ್ಪ ಉಪಾಧ್ಯೆ ಅವರಿಗೆ ಸೇರಿದ 8 ಎಕರೆ ಹೊಲದಲ್ಲಿನ ಶೇಂಗಾ ಬೆಳೆಯನ್ನು ಒಂದೆಡೆ ಬಣವೆ ಹಾಕಿ ಇನ್ನೇನು ಒಕ್ಕಲು ಮಾಡಬೇಕು ಎನ್ನುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ, ಅಷ್ಟರಲ್ಲಿ ಬಹುತೇಕ ಶೇಂಗಾ ಬೆಳೆಯು ಬೆಂಕಿಗೆ ಆಹುತಿಯಾಗಿತ್ತು. ಘಟನೆ ನಡೆದ ಸ್ಥಳಕ್ಕೆ ತಹಸಿಲ್ದಾರ್ ಆರ್.ಡಿ. ನಿಂಗನಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ರು. 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಪಿಎಸ್‌ಐ ವಿಕಾಸ ಲಮಾಣಿ, ಕಂದಾಯ ನಿರೀಕ್ಷಕ ಎಫ್.ಎನ್. ಹುಬ್ಬಳ್ಳಿ, ಸಹಾಯಕ ಕೃಷಿ ಅಧಿಕಾರಿ ಸೋಮು ಲಮಾಣಿ, ಪುರಸಭೆಯ ಮಾಜಿ ಸದಸ್ಯ ಮುತ್ತಣ್ಣ ಬಟ್ಟೂರ ಮುಂತಾದವರು ಹಾಜರಿದ್ದರು. ಈ ಕುರಿತು ಪಿಎಸ್‌ಐ ವಿಕಾಸ ಲಮಾಣಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.